Friday 8 April 2022

ಕನಸಾದ ಯತ್ನ

ಟ್ಟಡದ ತಳಪಾಯದಿಂದ ಆರಂಭಿಸಿ ನಿರ್ಮಾಣ ಪೂರ್ಣಗೊಳ್ಳುವವರೆಗೆ ಅಗತ್ಯವೆನಿಸುವ ತಿಳುವಳಿಕೆ ನೀಡಲು ಸಿದ್ಧರಿದ್ದ ಆರ್ಕಿಟೆಕ್ಟ್ ಕೆ ಸತೀಶ್, ಆ ಉದ್ದೇಶ ಪೂರ್ಣವಾಗುವ ಮುನ್ನವೇ ದೈವಾಧೀನರಾದ ಸಂಗತಿಯನ್ನು ಈ ಮುನ್ನಿನ ಬರಹದಲ್ಲಿ (ಲಿಂಕ್: https://bsranganath.blogspot.com/2013/04/blog-post_5.html) ವಿವರಿಸಿದ್ದೆ. ಅವರು ಮೌಖಿಕವಾಗಿ ಅರುಹಿದ್ದನ್ನು ನನ್ನ ಅನುಭವದ ಆಧಾರದ ಮೇಲೆ ಅತ್ಯಂತ ಸರಳವಾಗಿ ನಿರೂಪಿಸಿ, ಬರಹಗಳಿಗೆ ಅನುಗುಣವಾದ ಚಿತ್ರರಚನೆಯನ್ನು ಟಿ ಆರ್ ವರಾಹಮೂರ್ತಿಯವರಿಂದ ಮಾಡಿಸಿ ಓದುಗರ ಮುಂದಿಡುವ ಅಪೇಕ್ಷೆಯನ್ನು ನಾನು ಹೊಂದಿದ್ದೆ.

ನನ್ನ ಸೋದರಮಾವ ಟಿ ಆರ್ ವರಾಹಮೂರ್ತಿ (ಪತ್ರಕರ್ತರು ಪ್ರೀತಿಯಿಂದ ಅವರನ್ನು ’ವರಾಹ’ ಎಂದು ಸಂಬೋಧಿಸುತ್ತಿದ್ದರು) ಸಹ ಈಗ ಇಲ್ಲವಾಗಿದ್ದಾರೆ. ಬಹುಮುಖ ವ್ಯಕ್ತಿತ್ವದ ವರಾಹರ ಲೇಖನ, ಚಿತ್ರಗಳಿಗೆಂದು ಮೀಸಲಿಟ್ಟ ಬ್ಲಾಗ್ (ಲಿಂಕ್: https://varaahaseries.blogspot.com/ಅನಾಥವಾಗುತ್ತಿದೆ. ಈ ಮುನ್ನ ನನ್ನ ತಾಂತ್ರಿಕ ಬರಹಗಳಿಗೂ ಅವರು ವ್ಯಂಗ್ಯ ಚಿತ್ರಗಳನ್ನು ಬರೆದುಕೊಟ್ಟದ್ದುಂಟು.


ಆಂಗ್ಲ ದೈನಿಕವೊಂದರ ಸಪ್ಲಿಮೆಂಟ್ V T Propertyಯಲ್ಲಿ ೨೭.೦೧.೨೦೦೭ರಂದು
ಪ್ರಕಟವಾದ ನನ್ನ ತಾಂತ್ರಿಕ ಬರಹಕ್ಕೆಂದು ವರಾಹ ನಿರೂಪಿಸಿದ ಚಿತ್ರ

ಮೂರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದ ವರಾಹರಿಂದ ಪ್ರೇರಿತರಾದ ಬರಹಗಾರರೂ, ವ್ಯಂಗ್ಯಚಿತ್ರಕಾರರೂ ಅಲ್ಲಲ್ಲಿ ಭೇಟಿಯಾಗುವುದು ಆಶ್ಚರ್ಯವೇನಲ್ಲ. ಜಾನಪದ ಕಲಾ ಸಿದ್ಧಹಸ್ತರಾಗಿದ್ದ ವರಾಹರೊಂದಿಗೆ ಹಾಡಿ ಕುಣಿದು ದುಃಖಗಳನ್ನು ಮರೆಯುತ್ತಿದ್ದವರ ಸಂಖ್ಯೆಯೂ ಕಡಿಮೆಯೇನಲ್ಲ. ವರಾಹರ ಹಸ್ತನಿರ್ಮಿತ ಶಿಲ್ಪಗಳೂ ಅವರ ಅಭಿಮಾನಿಗಳ ಮನೆ, ಕಛೇರಿಗಳಲ್ಲಿ ರಾರಾಜಿಸುತ್ತಿವೆ. 


ಥರ್ಮೋಕೋಲ್ ಬಳಸಿ ವರಾಹರು ನಿರ್ಮಿಸಿದ ಶ್ರೀ ಯೋಗಾ ನರಸಿಂಹರ
ವಿಗ್ರಹ ಇದೀಗ ಬೆಂಗಳೂರಿನ ಆರ್ಟ್ ಆಫ಼್ ಲಿವಿಂಗ್ ಆಶ್ರಮದಲ್ಲಿ, 
ನಮ್ಮ ಪೂಜ್ಯ ಗುರೂಜಿಯವರ ಕುಟೀರದಲ್ಲಿದೆ. 

ಈ ಜೀವಿತಾವಧಿಯಲ್ಲಿ ಆರ್ಕಿಟೆಕ್ಟ್ ಕೆ ಸತೀಶ್ ಮತ್ತು ವರಾಹ ಅವರನ್ನು ಸರಿಗಟ್ಟುವ ಅನ್ಯರು ದೊರಕುವುದು ಕನಸು. ನನಸಾಗದ ಕನಸನ್ನು ಕಟ್ಟಿ ಪ್ರಿಯರಾದ ಓದುಗರಿಗೆ ನಿರಾಶೆ ಉಂಟುಮಾಡಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ.