Thursday 29 February 2024

ಬದುಕಿನ ಹಾದಿ - 7

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಬೆಂಕಿಕಡ್ಡಿಯು ಇತರರನ್ನು ಬೆಳಗುವ ಮೊದಲು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ, ಸುಖ-ದುಃಖಗಳ ಜೊತೆ ಕಣ್ಣಾಮುಚ್ಚಾಲೆಯಾಡದ ಬದುಕಾದರೂ ಎಂಥದ್ದು?

ಹಾಸನ ಜಿಲ್ಲೆಯ ಬೇಲೂರು ರಸ್ತೆಯಲ್ಲಿದ್ದ ಕುಪ್ಪಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕಿಯಾಗಿ ನಮ್ಮಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿತ್ತು. ಗ್ರಾಮಸ್ಥರು ಉಚಿತ ವಸತಿ ಒದಗಿಸಲು ಸಿದ್ಧರಾಗಿದ್ದರೂ ಅದನ್ನು ಒಪ್ಪಿಕೊಳ್ಳುವಂತಿರಲಿಲ್ಲ. ನನ್ನ ಮತ್ತು ನನ್ನ ತಂಗಿಯ ಪ್ರಾಥಮಿಕ ಶಿಕ್ಷಣ ಪೂರ್ಣಗೊಂಡಿದ್ದು, ನಮ್ಮ ಮುಂದಿನ ಓದು ಆರಂಭಿಸುವ ದೃಷ್ಟಿಯಿಂದ ನಾವು ಹಾಸನದಲ್ಲಿರಬೇಕಾದ ಅನಿವಾರ್ಯತೆಯಿತ್ತು. ಹಾಸನದಲ್ಲಿ ಸಾಂಸಾರಿಕ ವೆಚ್ಚ, ಮನೆ ಬಾಡಿಗೆ ಹಾಗೂ ಮಕ್ಕಳ ಶೈಕ್ಷಣಿಕ ಅಗತ್ಯ ಅಮ್ಮನಿಗೆ ಗಹನವಾದ ಆಲೋಚನೆಯ ವಿಷಯಗಳಾಗಿದ್ದವು.

ಹಾಸನ್ ಸಿಟಿಯ ಅರಳೇಪೇಟೆ ಬಡಾವಣೆಯಲ್ಲಿದ್ದ ಬಾಡಿಗೆ ಮನೆಯಿಂದ ಕುಪ್ಪಳ್ಳಿಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ 10 ಕಿ. ಮೀ. ದೂರದಲ್ಲಿತ್ತು. ಆ ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುತ್ತ ಹೋಗಿಬಂದು ಶಾಲಾಕರ್ತವ್ಯ ಪೂರೈಸಿ ಮನೆ ಖರ್ಚಿನ ತಕ್ಕಡಿ ತೂಗುವ ನಿರ್ಧಾರವನ್ನು ನಮ್ಮಮ್ಮ ತಳೆದರು. ಹಾಸನ ನೀರು ಸರಬರಾಜು ಇಲಾಖೆಯು ಸ್ಥಾಪಿಸಿದ ಕೊಳವೆಬಾವಿ ಅರ್ಧ ಕಿ. ಮೀ. ದೂರದಲ್ಲಿದ್ದು, ಅಲ್ಲಿಂದ ಬೆಳಗಿನ ಜಾವ 3 ಗಂಟೆಗೆ ನೀರು ಹಿಡಿದುಕೊಂಡು ಬಂದು ಮುಸುರೆ ತಿಕ್ಕಿ, ಸ್ನಾನ - ಅಡುಗೆ ಪೂರೈಸಿ, ಬಟ್ಟೆ ಒಗೆದು, ಮಕ್ಕಳೊಂದಿಗೆ ಉಪಹಾರ ಮುಗಿಸಿ, ಮಧ್ಯಾಹ್ನದ ಊಟಕ್ಕೆ ಲಂಚ್ ಬಾಕ್ಸ್ ತೆಗೆದುಕೊಂಡು ಡ್ಯೂಟಿ ಸಲುವಾಗಿ ಬೆಳಿಗ್ಗೆ 8 ಗಂಟೆಗೆ ಮನೆ ಬಿಡುವ ದಿನಚರಿಗೆ ಅಮ್ಮ ಹೊಂದಿಕೊಂಡರು. ಅವರೊಂದಿಗೆ ಪ್ರತಿದಿನ ಬೆಳಗಿನ ಜಾವ 3 ಗಂಟೆಗೆ ನೀರು ಹೊರುವ ಕಾಯಕಕ್ಕೆ ನಾನು ಮತ್ತು ನನ್ನ ತಂಗಿ ಸಹ ಸಜ್ಜಾದೆವು.

ಕುಪ್ಪಳ್ಳಿ ಶಾಲೆಯಲ್ಲಿ ಸಹೋಪಾಧ್ಯಾಯರಾಗಿದ್ದ ಶೇಷಾದ್ರಿ ಅಯ್ಯಂಗಾರ್ ಕುಟುಂಬದ ಸ್ಥಿತಿ ಸಹ ನಮ್ಮ ಕುಟುಂಬವನ್ನೇ ಹೋಲುತ್ತಿತ್ತು. ಕುಪ್ಪಳ್ಳಿ ಸಮೀಪದಲ್ಲಿದ್ದ ವುದ್ದೂರು ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಶಿಕ್ಷಕಿ ಫಿಲೋಮಿನ ಅವರ ಮನೆಯ ಪಾಡು ನಮಗಿಂತ ಭಿನ್ನವೇನೂ ಆಗಿರಲಿಲ್ಲ. ಇನ್ನು ಕೇಳುವುದೇನಿದೆ, ಗದ್ದೆಹಳ್ಳವನ್ನು ಹಾಯುತ್ತ 10 ಕಿ. ಮೀ. ಕಾಲ್ನಡೆಯುತ್ತಾ ದಿನವೂ ಶಾಲೆ ತಲುಪುವ ಕ್ರಮಕ್ಕೆ ನಮ್ಮಮ್ಮನೂ, ಇನ್ನಿಬ್ಬರೂ ಒಬ್ಬರಿಗಿನ್ನೊಬ್ಬರು ಸಹಾಯಕರಾದರು.

ಅದೇ ಕ್ರಮದಲ್ಲಿ ಸಮಯ ಉರುಳುತ್ತಿದ್ದಂತೆ ನಾನು ಹೈಸ್ಕೂಲ್ ಶಿಕ್ಷಣ ಪೂರೈಸಿ ಕಾಲೇಜಿಗೆ ಕಾಲಿಡುವ ಹಂತ ತಲುಪಿದೆ. ಹಾಸನ್ ಸಿಟಿಯ ಹೊರವಲಯದಲ್ಲಿದ್ದ ಎಸ್ ಎಲ್ ವಿ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗುವ ಅವಕಾಶ ನನಗೆ ಪ್ರಾಪ್ತವಾಯಿತು. ಅನಂತರ ನನಗೆ ಜೊತೆಯಾದ ಮಿತ್ರ ಶ್ಯಾಮಸುಂದರನೊಂದಿಗೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಮನೆ ಬಿಟ್ಟು, ಗದ್ದೆಹಳ್ಳ ಹಾಯುತ್ತ ನಡೆದು 4 ಕಿ. ಮೀ. ಸಾಗಿ ಶಿಕ್ಷಣಕೇಂದ್ರ ತಲುಪುವ ಪದ್ಧತಿಗೆ ನಾನು ಬದ್ಧನಾದೆ.

ನನ್ನ ತಾಂತ್ರಿಕ ಕಲಿಕೆ ಪೂರ್ಣವಾಗುವ ವೇಳೆಗೆ ನಮ್ಮಮ್ಮನಿಗೆ ಕರುಗುಂದ ಎಂಬ ಗ್ರಾಮಕ್ಕೆ ವರ್ಗವಾದ್ದರಿಂದ ನಾವು ಮನೆ ಬದಲಾಯಿಸಿ, ಕರುಗುಂದಕ್ಕಿಂತ ಉತ್ತಮ ಸ್ಥಾನವೆನಿಸಿದ್ದ ಹಾರನಹಳ್ಳಿ ಎಂಬಲ್ಲಿಗೆ ವಲಸೆ ಹೋಗುವಂತಾಯಿತು. ಜಾವಗಲ್ ರಸ್ತೆಯಲ್ಲಿದ್ದ ಕರುಗುಂದಕ್ಕೂ, ಹಾರನಹಳ್ಳಿಗೂ ಮಧ್ಯದ 4 ಕಿ. ಮೀ. ಹಾದಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಕಾಲ್ನಡಿಗೆ ಮೂಲಕವೂ, ಮಾರ್ನಿಂಗ್ ಕ್ಲಾಸ್ ಇದ್ದ ಶನಿವಾರದಂದು ಬಸ್ ಪ್ರಯಾಣದ ಮೂಲಕವೂ ಕ್ರಮಿಸುವ ಅಭ್ಯಾಸ ಬೆಳೆಸಿಕೊಂಡ ಅಮ್ಮ, ತಮ್ಮ ಶಾಲಾಶಿಕ್ಷಕಿ ಕರ್ತವ್ಯವನ್ನು ಕರಾರುವಾಕ್ಕಾಗಿ ನಿರ್ವಹಿಸಿದರು.

ಹಾರನಹಳ್ಳಿ ಓರ್ವ ಸಚಿವನನ್ನು (ಹಾರನಹಳ್ಳಿ ರಾಮಸ್ವಾಮಿ) ಕರ್ನಾಟಕ ಸರ್ಕಾರಕ್ಕೆ ನೀಡಿದ ಖ್ಯಾತಿಗೂ, ಜಾವಗಲ್ ಓರ್ವ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ (ಫಾಸ್ಟ್ ಬೌಲರ್ ಜಾವಗಲ್ ಶ್ರೀನಾಥ್)ನನ್ನು ಭಾರತಕ್ಕೆ ಒದಗಿಸಿದ ಹಿರಿಮೆಗೂ ಪಾತ್ರವಾಗಿವೆ.

Tuesday 27 February 2024

ಬದುಕಿನ ಹಾದಿ - 6

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಸ್ವೀಕೃತಿ, ಕಲಿಕೆ ಹಾಗೂ ಪ್ರಗತಿಯೇ ಬದುಕು; ಸೋತು, ಆನಂತರ ಎದ್ದು ಪರಿಸ್ಥಿತಿಯನ್ನು ನಿಭಾಯಿಸುವುದೇ ಬದುಕು.

ನಮ್ಮಪ್ಪ ಸತ್ತಾಗ ನಮ್ಮ ಪುಟ್ಟ ಕುಟುಂಬದಲ್ಲಿ ವಯೋಮಾನ ನಮ್ಮಮ್ಮನಿಗೆ 29 ವರ್ಷ, ನನಗೆ ಆರೂವರೆ ವರ್ಷ, ನನ್ನ ತಂಗಿಗೆ ಮೂರೂವರೆ ವರ್ಷ, ಹಾಗೂ ಕೈಕೂಸಾಗಿದ್ದ ನನ್ನ ತಮ್ಮನಿಗೆ ಕೇವಲ ಒಂದೂವರೆ ತಿಂಗಳು - ಇಂತಿತ್ತು. ನಮ್ಮಪ್ಪನ ಟೈಲರಿಂಗ್ ಷಾಪನ್ನು ಅಲ್ಲಿದ್ದ ದರ್ಜಿಗಳು, ಮತ್ತಿತರ ಕೆಲಸಗಾರರಿಗೆ ತಿಂಗಳು ತಿಂಗಳು ಸಂಬಳ ಕೊಡುತ್ತ ಮುಂದುವರಿಸಿಕೊಂಡು ಹೋಗುವ ಚೈತನ್ಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ನಮ್ಮಜ್ಜಿ (ನಮ್ಮಮ್ಮನ ಅಮ್ಮ) ಬಂದು, ಮಗಳನ್ನು ತಾನೇ ಮೈಸೂರಿಗೆ ಕರೆದುಕೊಂಡು ಹೋಗುವೆನೆಂದಾಗ 'ಸೊಸೆಯ ಮೇಲೆ ತಮ್ಮದೇ ಅಧಿಕಾರ' ಎಂದು ವಾದಿಸದೆ ನಮ್ಮಜ್ಜಿ (ನಮ್ಮಪ್ಪನ ಅಮ್ಮ) ಸೌಹಾರ್ದದಿಂದ ಬೀಳ್ಕೊಟ್ಟರು.

ಆಗಿನ ಕಾಲದಲ್ಲಿ ಗಂಡ ದುಡಿದು ತಂದು ಹಾಕಿದರೆ ಮಾತ್ರ ಹೆಂಡತಿ ನಿರ್ಭಯದಿಂದ ಮಾಡಿ ಹಾಕಬಹುದಾದಂಥ ಪರಿಸ್ಥಿತಿಯಿತ್ತು. ಈಗಿನ ಹಾಗೆ ಹೆಂಡತಿ 'ದುಡಿದು ತರುವುದು ನನ್ನ ಕೆಲಸ, ಅಚ್ಚುಕಟ್ಟಾಗಿ ಮಾಡಿ ಹಾಕುವ ಜವಾಬ್ದಾರಿಯನ್ನು ನೀನು ವಹಿಸಿಕೊ' ಎಂದು ದಬಾಯಿಸುವುದು ಕನಸಿನ ಮಾತಾಗಿತ್ತು. ನಮ್ಮಪ್ಪನಿಲ್ಲವಾದ ಬಳಿಕ ತನ್ನ ಆಲೋಚನೆಯ ಶಕ್ತಿಯನ್ನು ಮೀರಿ ನಮ್ಮಮ್ಮ ದುಡಿಯುವ ಧೈರ್ಯವನ್ನೂ, ಮಾಡಿ ಹಾಕುವ ಶ್ರಮವನ್ನೂ ಒಗ್ಗೂಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಪರಿಸ್ಥಿತಿಯನ್ನು ಛಲದಿಂದ ಸ್ವೀಕರಿಸಲು ಮುಂದಾದ ನಮ್ಮಮ್ಮ, ಮೈಸೂರಿನ ಚಾಮುಂಡಿಪುರಂನಲ್ಲಿದ್ದ ಸೇಂಟ್ ಮೇರಿ ಶಾಲೆಗೆ ತೆರಳಿ, ಅಲ್ಲಿ ಮುಖ್ಯಸ್ಥೆಯಾಗಿದ್ದ ಸಿಸ್ಟರ್ ಸಿಸೀಲಿಯಾ ಅವರಲ್ಲಿ ಮನವಿ ಮಾಡಿಕೊಂಡರು. ಎಲ್ಲವನ್ನೂ ತಾಳ್ಮೆಯಿಂದ ಆಲಿಸಿದ ಸಿಸ್ಟರ್ ಸಿಸೀಲಿಯಾ, ಕನಿಷ್ಠ ವಿದ್ಯಾರ್ಹತೆ ಇದ್ದ ನಮ್ಮಮ್ಮನನ್ನು ಕುರಿತು 'ನಿನಗೆ ಸದ್ಯಕ್ಕೆ ನಮ್ಮ ಕಾನ್ವೆಂಟಿನ ಅಡುಗೆ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತೇನೆ. ನೀನು ಪ್ರತಿದಿನ ಸಂಜೆ ಮನೆಗೆ ಹಿಂದಿರುಗಿದ ನಂತರ ಓದಿಕೊಂಡು ಪ್ರೈವೇಟಾಗಿ ಮೆಟ್ರಿಕ್ ಪರೀಕ್ಷೆಗೆ ದಾಖಲಾಗು. ಅನಂತರ ನಿನಗೆ ಓರ್ವ ಟೀಚರ್ ಕೆಲಸ ಕೊಡುತ್ತೇನೆ' ಎಂದರು. ಮೆಟ್ರಿಕ್ ಪರೀಕ್ಷೆ ದಾಖಲಾತಿ ಮುಖೇನ ಸಾರ್ವಜನಿಕ ಸೇವೆ ನಿರ್ವಹಿಸುವ ಅರ್ಹತೆ (EPS - Eligibility for Public Services) ಆ ದಿನಗಳಲ್ಲಿ ಪ್ರಾಪ್ತವಾಗುತ್ತಿತ್ತು. ಹಿಂಜರಿಯದೆ, ಸೇಂಟ್ ಮೇರಿ ಶಾಲೆಯ ಬಾಣಸಿಗ ವೃತ್ತಿ ಹಾಗೂ ಮೆಟ್ರಿಕ್ ಶಿಕ್ಷಣಭ್ಯಾಸವನ್ನು ಏಕಕಾಲದಲ್ಲಿ ನಮ್ಮಮ್ಮ ಆರಂಭಿಸಿದರು. 

ಹಾಸನ ಜಿಲ್ಲಾ ಗ್ರಾಮವೊಂದರಲ್ಲಿ ಸರ್ಕಾರಿ ವೈದ್ಯರಾಗಿದ್ದ ನಮ್ಮ ಮಾವ ಡಾ. ರಾಮರಾಜು (ನಮ್ಮಮ್ಮನ ಅಣ್ಣ) 'ಮೆಟ್ರಿಕ್ ಜೊತೆಗೆ ಹಿಂದಿ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಲು ಪ್ರಯತ್ನಿಸು. ನೇರವಾದ ಸರ್ಕಾರಿ ಹುದ್ದೆ ಪಡೆಯಲು ಅದರಿಂದ ಸಹಾಯವಾಗುತ್ತದೆ' ಎಂದು ಸೂಚಿಸಿದಾಗ ಅದನ್ನೂ ಮನೋಬಲದಿಂದ ಕೈಗೆತ್ತಿಕೊಂಡು ಸ್ವಲ್ಪ ಕಾಲದಲ್ಲಿಯೇ ಸ್ನಾತಕೋತ್ತರ ಪದವಿಗೆ ಸರಿಸಮಾನವಾದ 'ಹಿಂದಿ ರತ್ನ' ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತೇರ್ಗಡೆಯಾದರು. ಹಿಂದಿ ಶಿಕ್ಷಕರ ಅಭಾವವಿದ್ದ ನಿಮಿತ್ತ ಸರ್ಕಾರವು ತಡಮಾಡದೆ, ಅವರು ಹಾಸನ ಜಿಲ್ಲಾ ಗ್ರಾಮವೊಂದರ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕಿ ಹುದ್ದೆ ನಿರ್ವಹಿಸತಕ್ಕದ್ದು ಎಂಬ ಆಜ್ಞೆ ಹೊರಡಿಸಿತು.

ಆ ವೇಳೆಗೆ ಸೇಂಟ್ ಮೇರಿ ಶಾಲೆಯ ಶಿಕ್ಷಕಿ ಹುದ್ದೆ ನಿರ್ವಹಿಸಿ ವಿದ್ಯಾರ್ಥಿಗಳಿಗೆ ಅತ್ಯಂತ ಅಚ್ಚುಮೆಚ್ಚು ಎಂಬ ಹಿರಿಮೆ ಸಂಪಾದಿಸಿದ್ದ ನಮ್ಮಮ್ಮನನ್ನು ಸಿಸ್ಟರ್ ಸಿಸೀಲಿಯಾ ಬೀಳ್ಕೊಟ್ಟದ್ದು ಒಲ್ಲದ ಮನಸ್ಸಿನಿಂದಲೇ.

Sunday 25 February 2024

ಬದುಕಿನ ಹಾದಿ - 5

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಮನ ಮೆಚ್ಚುವಂತಿರುವುದು ಮತ್ತು ಮನದಿಂದ ದೂರಾಗುವುದು ಮನುಷ್ಯನ ನಡವಳಿಕೆಯನ್ನು ಅವಲಂಬಿಸಿರುತ್ತದೆ.

ಸುಖದುಃಖಗಳಿಲ್ಲದೆ ಸಂಸಾರವಿಲ್ಲ. ಸುಖಾಂತದುಃಖಾಂತಗಳನ್ನು ಉಪದೇಶಿಸದ ಧರ್ಮಗ್ರಂಥಗಳಿಲ್ಲ. ಸುಖ ನೆಮ್ಮದಿಯನ್ನು ನೀಡುತ್ತದೆ, ದುಃಖವು ಪಾಠ ಕಲಿಸುತ್ತದೆ. ಪಾಠ ಕಲಿತು ಪ್ರಾಜ್ಞರಾದರೆ ನೆಮ್ಮದಿಯ ಬದುಕು ನಮ್ಮದಾಗುತ್ತದೆ.

ಧರ್ಮಗ್ರಂಥಗಳನ್ನು ಅರೆದು ಕುಡಿದಿದ್ದ ನಮ್ಮಜ್ಜ (ಅಪ್ಪನ ಅಪ್ಪ) ಬಾಹ್ಯ ಜಗತ್ತಿನಲ್ಲಿ ಪ್ರಕಾಂಡ ಪಂಡಿತನೆಂಬ ಹೊಗಳಿಕೆಗೆ ಪಾತ್ರರಾಗಿದ್ದರೂ, ಮನೆಯವರ ಮಟ್ಟಿಗೆ ಮೃತ್ಯುಸ್ವರೂಪಿಯಾಗಿದ್ದುದು ನಂಬಲಾರದ ಸತ್ಯ. ಅವರೊಂದಿಗೆ ಮನೆಯಲ್ಲಿದ್ದವರು ಪರಮ ಯಾತನೆಯಿಂದ ಬದುಕಲಾರದೆ ಬದುಕಿದರೆ, ಮನೆ ಬಿಟ್ಟು ಹೋದ (ದಶಕಗಳ ನಂತರ ಆತ ಇನ್ನಿಲ್ಲವೆಂಬುದನ್ನು ಖಚಿತಪಡಿಸಿಕೊಂಡೇ ಹಿಂದಿರುಗಿದ) ನಮ್ಮಪ್ಪ ಮತ್ತು ಚಿಕ್ಕಪ್ಪ ತಮ್ಮ ಹಣೆಯಲ್ಲಿ ಬರೆದಿದ್ದಂಥ ಬುದ್ಧಿ ಕಲಿತದ್ದು ಕೇವಲ ಅಲೆಮಾರಿಗಳಾಗಿಯೇ.

ಆಗ್ಗೆ ಊಟದ ಸಮಯದಲ್ಲಿ 'ನಾರಾಯಣಾಯ ನಮಃ' ಎಂದು ಉಚ್ಚರಿಸಿದ ನಂತರವೇ ಪ್ರತಿಯೊಂದು ತುತ್ತು ಆಹಾರವನ್ನು ಬಾಯಿಗೆ ಇರಿಸತಕ್ಕದ್ದು ಎಂಬ ನಿಯಮ ನಮ್ಮ ಕುಟುಂಬಕ್ಕೆ ಅನ್ವಯವಾಗುತ್ತಿತ್ತು. ಆ ನಿಯಮ ಮೀರಿದವರು ನಮ್ಮಜ್ಜನ ಕಠಿಣ ಶಿಕ್ಷೆಗೆ ಗುರಿಯಗುತ್ತಿದ್ದರು. ಸುಮಾರು ಹತ್ತು ವರ್ಷ ವಯಸ್ಸಾಗಿದ್ದ ನಮ್ಮಪ್ಪ ಒಂದು ದಿನ ಮರೆತು ಒಂದು ತುತ್ತನ್ನು ಬಾಯಿಗಿಟ್ಟ ತಕ್ಷಣ ಧಾವಿಸಿದ ನಮ್ಮಜ್ಜ ಬಲವಾಗಿ ಮುಖಕ್ಕೆ ಗುದ್ದಿದರಂತೆ. ಇನ್ನೂ ಧೃಡವಾಗಿರದ ಅವರ ಮೇಲೊಸಡಿನ ಎರಡು ಹಲ್ಲುಗಳು ಕಳಚಿಕೊಂಡು ಅವರ ಊಟದ ತಟ್ಟೆಯೊಳಕ್ಕೆ ಬಿದ್ದುವಂತೆ. 'ಇನ್ನೀ ದೌರ್ಜನ್ಯವನ್ನು ಎದುರಿಸಲಾರೆ' ಎಂದು ಆ ದಿನ ಮನೆ ಬಿಟ್ಟ ನಮ್ಮಪ್ಪ ಹಿಂದಿರುಗಿದ್ದು ನಮ್ಮಜ್ಜ ಮರಣಿಸಿದ ನಂತರವೇ. ಮುಂದೊಂದು ದಿನ ಅದೇ ಥರದ ಸನ್ನಿವೇಶ ಏರ್ಪಟ್ಟು ನಮ್ಮ ಚಿಕ್ಕಪ್ಪನೂ ಮನೆ ಬಿಟ್ಟು ಹೋಗುವುದು ಅನಿವಾರ್ಯವಾಯಿತಂತೆ.

ರೈಲ್ವೆ ಇಲಾಖೆಯ ಪ್ರಯಾಣಿಕರ ಟಿಕೆಟ್ ತಪಾಸಕ (TTE) ಹುದ್ದೆಯಿಂದ ನಿವೃತ್ತರಾಗುವ ಮುನ್ನ ಆ ಹುದ್ದೆಯನ್ನು ನಮ್ಮಪ್ಪನಾಗಲಿ, ಚಿಕ್ಕಪ್ಪನಾಗಲಿ ನಿರ್ವಹಿಸುತ್ತ ಮುಂದುವರಿಯಲು ಸಾಧ್ಯವಿದ್ದಂಥ ಸೌಲಭ್ಯವನ್ನು ಸಹಾ ಕೈಬಿಟ್ಟು ನಮ್ಮಜ್ಜ ತಮ್ಮ ನಿರ್ದಯ ಮನಸ್ಸಿನ ಒಂದು ಮಗ್ಗುಲನ್ನು ಪ್ರದರ್ಶಿಸಿದರು. ಅಲ್ಲದೆ, ನಿವೃತ್ತಿ ಸಮಯದ ಅಸುಪಾಸಿನಲ್ಲಿ ಪೂರ್ವಜರ ಆಸ್ತಿಯಾದ ಕಾಫಿ ತೋಟದ ಒಂದು ಪಾಲು ತಮಗೆ ದೊರೆತಾಗ ಅದನ್ನು ಮುಂದಿನ ಪೀಳಿಗೆಗೋಸ್ಕರ ಸಂರಕ್ಷಿಸದೆ ಮಾರಾಟ ಮಾಡಿ, ದೊರೆತ ಧನರಾಶಿಯನ್ನು ಕುದುರೆ ರೇಸುಗಳ ಮೇಲೆ ಹೂಡಿ ಹಾಳುಮಾಡಿದರು. ಅದೇ ಸಂದರ್ಭದಲ್ಲಿ (ಚಿಕ್ಕಮಗಳೂರು ಸಮೀಪದ ಚೀಕನಹಳ್ಳಿಯಲ್ಲಿರುವ 'ಕೋಗೋಡ್ ಎಸ್ಟೇಟ್' ಎಂಬ ಖ್ಯಾತನಾಮವುಳ್ಳ) ಆ ಕಾಫಿ ತೋಟದ ಇನ್ನೊಂದು ಪಾಲಿನ ಹಕ್ಕುದಾರನಾದ ನಮ್ಮ ಚಿಕ್ಕಜ್ಜ ಅದರ ಸದುಪಯೋಗಕ್ಕೆ ಮುಂದಾಗಿ, ಮೈಸೂರಿನ ಒಂಟಿಕೊಪ್ಪಲಿನಲ್ಲಿ 'ಕೋಗೋಡ್ ಹೌಸ್' ಎಂಬ ವಿಖ್ಯಾತ ಬಂಗಲೆಯೊಂದನ್ನು ನಿರ್ಮಿಸಿದರು. ಅಲ್ಲದೆ, ಬೆಂಗಳೂರಿನ ಪ್ರಪ್ರಥಮ 'ಸಿಟಿ ಮಾರ್ಕೆಟ್ ಸುರಂಗಮಾರ್ಗ' ನಿರ್ಮಿಸಿದ ಹೆಗ್ಗಳಿಕೆಯೂ ನಮ್ಮ ಚಿಕ್ಕಜ್ಜನ ಕುಟುಂಬಕ್ಕೆ ಸಲ್ಲುತ್ತದೆ.

ಬೇರೆಬೇರೆ ಸಂದರ್ಭಗಳಲ್ಲಿ ಮನೆ ಬಿಟ್ಟ ನಮ್ಮಪ್ಪ, ಚಿಕ್ಕಪ್ಪ ಬೇರೆಬೇರೆಯಾಗಿಯೇ ಗಲ್ಲಿಗಲ್ಲಿಗಳಲ್ಲಿ ಅಲೆಯುತ್ತ, ಎಲ್ಲೆಂದರಲ್ಲಿ ಉಂಡು ಮಲಗೇಳುತ್ತ ಅಂತಿಮವಾಗಿ ಕಲ್ಕತ್ತಾದ 'ದಾಸ್ ಫ್ಯಾಮಿಲಿ' ಆಶ್ರಯದಲ್ಲಿ ಪರಸ್ಪರ ಭೇಟಿಯಾಗಿ, ಟೈಲರಿಂಗ್ ಇತ್ಯಾದಿ ಕಸುಬುಗಳನ್ನು ತಮ್ಮದಾಗಿಸಿಕೊಂಡು, ಕನಿಷ್ಠ ಮೂರು ದಶಕಗಳ ತರುವಾಯ, ನಮ್ಮಜ್ಜ ಸತ್ತ ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ನಂತರ ಮನೆಗೆ ಹಿಂದಿರುಗಿದರಂತೆ.

Friday 23 February 2024

ಬದುಕಿನ ಹಾದಿ - 4

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಯಾರನ್ನೂ ನಿಷ್ಪ್ರಯೋಜಕ ಎಂದು ಪರಿಗಣಿಸಬೇಡಿ. ಏಕೆಂದರೆ ಫಲ ನೀಡದ ಮರವೂ ಸಹ ನಮಗೆ ನೆರಳನ್ನು ನೀಡುವುದು ನಿಶ್ಚಿತ.

ಕಡೆಗಣಿಕೆ, ಅರ್ಥಾತ್ ತಾತ್ಸಾರದಿಂದ ಕಾಣುವ ಮುಖೇನ ಯಾವುದೇ ಸತ್ಪರಿಣಾಮವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಮ್ಮತ್ತೆಯೋರ್ವರು ತೀವ್ರವಾಗಿ ಕಡೆಗಣಿಸಲ್ಪಟ್ಟು ಚಿಕ್ಕ ವಯಸ್ಸಿನಲ್ಲೇ ಅಸು ನೀಗಿದರು. ತಾತ್ಸಾರಕ್ಕೆ ಗುರಿಯಾದ ನಮ್ಮಪ್ಪ ಮತ್ತು ಚಿಕ್ಕಪ್ಪ ವಿದ್ಯಾರ್ಥಿಗಳಾಗಿರಬೇಕಾದ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ಸಮಸ್ತ ಭಾರತದ ಬೀದಿಬೀದಿಗಳನ್ನು ಸುತ್ತುತ್ತ ಕಂಡಕಂಡ ಕಸುಬುಗಳನ್ನೆಸಗುತ್ತಾ ಕಾಲ ಕಳೆದರು.

ನಮ್ಮ ಕುಟುಂಬದಲ್ಲಿ ನಮ್ಮಪ್ಪ ಮತ್ತು ಚಿಕ್ಕಪ್ಪನ ನಡುವೆ ಇಂದಿರಾ ಮತ್ತು ಲೀಲಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದರಂತೆ. ಮದುವೆಯ ಮುನ್ನ ಅಡುಗೆ ಮತ್ತು ಮನೆ ಕೆಲಸವನ್ನು ಅವರಿಬ್ಬರೂ ಹಂಚಿಕೊಂಡು ಮಾಡುತ್ತಿದ್ದ ನಿಮಿತ್ತ, ಇಡೀ ಮನೆ ಒಂದಿಷ್ಟೂ ಧೂಳಿರದೆ ಕಣ್ಣುಗಳಿಗೆ ಹಬ್ಬವುಂಟುಮಾಡುವುದರ ಜೊತೆಗೆ ಮನೆಯವರೆಲ್ಲರಿಗೂ ಪ್ರತಿದಿನ ಸ್ವಾದಿಷ್ಟವಾದ ಮೃಷ್ಟಾನ್ನವನ್ನು ಸವಿಯುವ ಅವಕಾಶ ಪ್ರಾಪ್ತವಾಗುತ್ತಿತ್ತು.

ಆ ಬಾಲೆಯರ ಪೈಕಿ ಇಂದಿರಾ ಮದುವೆಯಾಗಿ, ಕಾವ್ಯವಾಚನಕ್ಕೆ ಹೆಸರುವಾಸಿಯಾಗಿದ್ದ ಕುಟುಂಬವೊಂದರ ಸೊಸೆಯಾಗಿ ತೆರಳಿದಳು. ಸಮಯ ಕಳೆದಂತೆ ಕಾರ್ಯತತ್ಪರ ಇಂದಿರಾಗೆ ಪತಿಗೃಹದಲ್ಲಿ ಎಡೆಬಿಡದೆ ಸಾಗುತ್ತಿದ್ದ ಗಮಕಾಭ್ಯಾಸದ ತರಂಗಗಳು ಚಿಟ್ಟು ಹಿಡಿಸತೊಡಗಿದವು. ಒಂದು ದಿನ ಮಧ್ಯಾಹ್ನ ಯಾರೂ ಮನೆಯಲ್ಲಿ ಇಲ್ಲದಿದ್ದಾಗ, ಗಮಕ ಕುರಿತು ಅವಳ ಮನದಲ್ಲೆದ್ದ ಕ್ರೋಧವು ಅಲ್ಲಿದ್ದ ಒಂದಷ್ಟು ಅಭ್ಯಾಸ ಪುಸ್ತಕಗಳ ಕಡೆಗೆ ಹರಿಹಾಯ್ದಿತು. ಇಂದಿರಾ ಅವುಗಳನ್ನೆತ್ತಿ ತಂದು ಮನೆಯ ಮುಂದೆ ಮೋರಿಯಲ್ಲಿ ರಭಸದಿಂದ ಹರಿಯುತ್ತಿದ್ದ ನೀರಿನೊಳಕ್ಕೆ ಸುರಿದಳು. ಕ್ಷಣಾರ್ಧದೊಳಗೆ ಆ ಪುಸ್ತಕಗಳು ಪ್ರವಾಹದಲ್ಲಿ ಮಾಯವಾದವು.

ನಂತರ ಮನೆಯವರು ವಿಚಾರಿಸಿದಾಗ ಎಲ್ಲವನ್ನೂ ಇದ್ದುದಿದ್ದಂತೆ ವಿವರಿಸಿದ ಇಂದಿರಾ, ಆವೇಶದ ಭರದಲ್ಲಿ ಹಾಗೆ ಮಾಡಿದೆನೆಂದಳು. ಆಗ ಮನೆಯವರಲ್ಲಿ ಸೊಸೆಯ ಮೇಲಿನ ಮಮಕಾರ ಮಾಯವಾಗಿ ಆ ಸ್ಥಾನವನ್ನು ತಾತ್ಸಾರ ಅವರಿಸಿತು. 'ಗಮಕ ನಿನಗೆ ಬೇಡವೆಂದರೆ ನೀನೂ ನಮಗೆ ಬೇಡ' ಎನ್ನುತ್ತಾ ಅವಳ ಗಂಡ ಮೊದಲುಗೊಂಡು ಮನೆಯವರೆಲ್ಲರೂ ಅವಳನ್ನು ಮನೆಯಿಂದಾಚೆಗೆ ದಬ್ಬಿದರು! ಅಜರಾಮರವೆಂದು ಹೊಗಳಿಸಿಕೊಳ್ಳುವ ಗಂಡ - ಹೆಂಡಿರ ಪ್ರೇಮ ಅಷ್ಟೊಂದು ಕ್ಷುಲ್ಲಕ ರೀತಿಯಲ್ಲಿ ಆ ಕುಟುಂಬದಲ್ಲಿ, ಭಾರತಕ್ಕೆ ಸ್ವತಂತ್ರ ಲಭಿಸಿದ ಹೊಚ್ಚಹೊಸತರಲ್ಲಿಯೇ ನುಚ್ಚುನೂರಾಗಿದ್ದು ಅನಿರೀಕ್ಷಿತ.

ರಸ್ತೆಗೆ ಬಂದು ಬಿದ್ದ ಇಂದಿರಾಳ ಮೇಲೆ ಅಪ್ಪಳಿಸಿದವು, ಮನೆಯಿಂದ ತೂರಲ್ಪಟ್ಟ ಅವಳ ಬಟ್ಟೆಬರೆಗಳು! ದಿಕ್ಕು ತೋಚದೆ ಅವಳು ಗಂಟೆಗಟ್ಟಲೆ ಅಲ್ಲಿಂದ ಕದಲಲಿಲ್ಲ, ಆದರೂ ಆ ನಿರ್ದಯಿ ಮನೆಯ ಬಾಗಿಲು ತೆರೆಯಲಿಲ್ಲ, ಆ ಮನೆಯೊಳಕ್ಕೆ ಮತ್ತೊಮ್ಮೆ ಕಾಲಿಡಲು ಅವಳಿಗೆ ಸಾಧ್ಯವಾಗಲಿಲ್ಲ. ಅಂದಿನ ನೀರೆಯರಿಗೆ, ಇಂದು ಹೆಣ್ಣುಮಕ್ಕಳಿಗೆ ಸ್ವತಂತ್ರವಾಗಿ ನೆಲೆಯೂರಲು ಲಭಿಸುತ್ತಿರುವಂಥ ಅವಕಾಶಗಳನ್ನು ಕನಸಿನಲ್ಲಿಯೂ ನೆನೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಕಣ್ಣೀರು ಹಾಕುತ್ತ ತವರಿಗೆ ಹಿಂದಿರುಗಿದ ಇಂದಿರಾಳ ಸಮ್ಮುಖದಲ್ಲಿ ಅವಳ ಅಪ್ಪನ ರೂಪದಲ್ಲಿದ್ದ ಬ್ರಹ್ಮರಾಕ್ಷಸ (ನಮ್ಮಜ್ಜ - ಅಪ್ಪನ ಅಪ್ಪ) ಪ್ರತ್ಯಕ್ಷನಾದ! ದುಃಖಾತಿರೇಕರೇಕದೊಂದಿಗೆ ಸ್ವಪುತ್ರಿಯಾದ ಇಂದಿರಾ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡ ಆ ಪಾಪಿ ಕಿಂಚಿತ್ತಾದರೂ ಮರುಕವಿಲ್ಲದೆ, 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗು. ಆದ್ದರಿಂದ ನೀನು ಇಲ್ಲಿಂದ ತೊಲಗು' ಎಂದು ಅಬ್ಬರಿಸಿದ. ಆ ಅಯೋಗ್ಯನ ವರ್ತನೆ ಸಹ್ಯವಾಗದೆ, ಮಗಳ ಕಷ್ಟವನ್ನು ಕಣ್ತುಂಬಿಕೊಳ್ಳಲಾರದೆ ನಮ್ಮಜ್ಜಿ ಮಧ್ಯೆ ಪ್ರವೇಶಿಸಿದರು. ಅವರನ್ನೂ ಒದ್ದು ಮೂಲೆಗೆ ತಳ್ಳಿದ ನಮ್ಮಜ್ಜ. ದಬ್ಬಾಳಿಕೆ ಆ ದಿನಗಳಲ್ಲಿ ಅದಿನ್ನೆಷ್ಟು ಪ್ರಚಂಡವಾಗಿತ್ತು ಎಂಬುದನ್ನು ಊಹಿಸಿಕೊಳ್ಳಿ!

ನಮ್ಮಜ್ಜ ಯಾರ ಮಾತಿಗೂ ಜಗ್ಗದೆ, ಇಂದಿರಾಳನ್ನು ದೂರೀಕರಿಸಿಯೇ ಸಿದ್ದವೆಂಬ ವಿಕೃತ ಸಂಕಲ್ಪದಲ್ಲಿದ್ದ. ಆದರೆ ನಮ್ಮಜ್ಜಿಯ ಮನಸ್ಸು ತಡೆಯಲಿಲ್ಲ. ಸಮೀಪದಲ್ಲಿಯೇ ಒಂದು ಕೋಣೆಯನ್ನು ಬಾಡಿಗೆಗೆ ಗೊತ್ತುಮಾಡಿ ಮಗಳನ್ನು ಅದರಲ್ಲಿರಿಸಿದರು. ಉಪಹಾರ ಮತ್ತು ಊಟವನ್ನು ಅಜ್ಜನ ಕಣ್ಣು ತಪ್ಪಿಸಿ ತಂದು ಅವಳಿಗೆ ಊಡಿಸಿ, ಅವಳು ಬದುಕಿನ ಮೇಲೆ ಮತ್ತೆ ವಿಶ್ವಾಸ ಹೊಂದುವಂತೆ ಮಾಡಲು ಶತಪ್ರಯತ್ನ ನಡೆಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಇನ್ನಿಲ್ಲದಂತೆ ನಲುಗಿಹೋಗಿದ್ದ ಇಂದಿರಾ ಸಂಪೂರ್ಣವಾಗಿ ಅನ್ನ ನೀರು ತ್ಯಜಿಸಿದ್ದರಿಂದ, ಪ್ರಪಂಚವನ್ನೇ ಸರಿಯಾಗಿ ನೋಡಿರದ ತನ್ನ 20 - 21ರ ವಯೋಮಾನದಲ್ಲಿ, ಕೆಲವೇ ದಿನಗಳೊಳಗೆ ಇನ್ನಿಲ್ಲವಾದಳು.

Wednesday 21 February 2024

ಬದುಕಿನ ಹಾದಿ - 3

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಜೀವನ ಕೆಟ್ಟದಾಗಿದೆ ಎಂದು ಎಂದಿಗೂ ಹೇಳಬೇಡಿ. ನಾವು ಮುಳ್ಳುಗಳಿಂದ ಸುತ್ತುವರಿದ ಗುಲಾಬಿಗಳು ಎಂದು ಅರ್ಥಮಾಡಿಕೊಳ್ಳಿ.

ನಮ್ಮಮ್ಮನದ್ದು ಕೇವಲ ಎಂಟು ವರ್ಷಗಳ ಅವಧಿಯ ವೈವಾಹಿಕ ಬದುಕು. ಅಷ್ಟು ಕಡಿಮೆ ಅವಧಿಯಲ್ಲಿಯೇ ಅವರಿಗೆ ಎದುರಾದ ವಿಸ್ಮಯಗಳು ಹಲವು. ಆ ದಿನಗಳಲ್ಲಿ ಮೊಟ್ಟಮೊದಲನೆಯದಾಗಿ ಪತ್ನಿಯು ತನ್ನ ಅಡುಗೆ ಕೈಚಳಕದ ಮೂಲಕ ಪತಿಯನ್ನು ಆಕರ್ಷಿಸುವಳೆಂದು ನಿರೀಕ್ಷಿಸಲಾಗುತ್ತಿತ್ತು. ವಿವಾಹ ಪೂರ್ವದಲ್ಲಿ ಅಡುಗೆ ಕುಶಲತೆ ಪ್ರದರ್ಶಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮನಸ್ಸನ್ನೂ ಸೂರೆಗೊಳ್ಳುತ್ತಿದ್ದ ನಮ್ಮಮ್ಮನಿಗೆ, ಖಾರದ ಅಡುಗೆ ವಿಷಯದಲ್ಲಿ ನಮ್ಮಪ್ಪನನ್ನು ತೃಪ್ತಿ ಪಡಿಸಲು ಸಾಧ್ಯವೇ ಆಗಲಿಲ್ಲವಂತೆ. ತುತ್ತಿಗೆ ಒಂದರಂತೆ ಜಗಿಯುತ್ತ, ಒಂದು ಹೊತ್ತಿನ ಊಟ ಪೂರೈಸುವುದರೊಳಗೆ ಬೆರಳುದ್ದದ ಕಾಲು ಕಿಲೋ ಹಸಿಮೆಣಸಿನಕಾಯಿಯನ್ನು ನಮ್ಮಪ್ಪ ಖಾಲಿ ಮಾಡುತ್ತಿದ್ದರಂತೆ!

ಮೂವಿಲ್ಯಾಂಡ್ ಥಿಯೇಟರಿನ ಬಲಭಾಗದ ರಸ್ತೆಯಲ್ಲಿರುವ ಅಂಗಡಿ ಸಾಲಿನಲ್ಲಿ ಒಂದು ನಮ್ಮಪ್ಪನ ಟೈಲರಿಂಗ್ ಷಾಪ್ ಆಗಿತ್ತಂತೆ. ಅಲ್ಲಿಂದ ಒಂದು ಫರ್ಲಾಂಗ್ ದೂರದಲ್ಲಿ, ಅದೇ ಮೂವಿಲ್ಯಾಂಡ್ ಮುಖ್ಯರಸ್ತೆಯ ಹಿಂಬದಿಗಿದ್ದ ಕಿರುರಸ್ತೆಯಲ್ಲಿ ನಮ್ಮಪ್ಪ ವಾಸಕ್ಕೆ ಮನೆ ಮಾಡಿದ್ದರಂತೆ. ವೈವಾಹಿಕ ಜೀವನದ ಆರಂಭದಲ್ಲಿ ನಮ್ಮಮ್ಮನ ಜೊತೆಯಲ್ಲಿ ನಮ್ಮಜ್ಜಿ (ನಮ್ಮ ಅಪ್ಪನ ಅಮ್ಮ) ಸಹ ಇದ್ದರಂತೆ. ಒಂದು ದಿನ ನಮ್ಮಪ್ಪ ಒಬ್ಬ ಮುದುಕನನ್ನು ಮನೆಗೆ ಕರೆತಂದು, "ಇವರಿಗೆ ದಿನಾ ಬೆಳಿಗ್ಗೆ ಚೆನ್ನಾಗಿ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಉಪಹಾರ ಕೊಟ್ಟು ಅಂಗಡಿಗೆ ಕಳಿಸು" ಎಂದು ನಮ್ಮಮ್ಮನಿಗೆ ಹೇಳಿದರಂತೆ. ಅಲ್ಲಿಯೇ ಇದ್ದ ನಮ್ಮಜ್ಜಿ, "ಹೆಂಡತಿಗೆ ಇಂಥ ಕೆಲಸ ಹೇಳುತ್ತಿದ್ದಿಯಲ್ಲ, ನಿನಗೆ ನಾಚಿಕೆ ಆಗುವುದಿಲ್ಲವೇ?" ಎಂದು ಚೆನ್ನಾಗಿ ಬೈದರಂತೆ. ಮರುಮಾತಾಡದೆ ಆನಂತರ ನಮ್ಮಪ್ಪ, ತನ್ನ ಅಂಗಡಿಯ ಆ ಹೊಸ ಮುದಿ ದರ್ಜಿಯನ್ನು ವಾಪಸ್ ಕರೆದುಕೊಂಡು ಹೋದರಂತೆ. ಆತ ಮತ್ತಿನ್ನೆಂದೂ ಮನೆಯ ಕಡೆ ಸುಳಿಯಲಿಲ್ಲ.

ಇನ್ನೊಮ್ಮೆ ನಮ್ಮಪ್ಪ, ನವದಂಪತಿಗಳಾದ ಓರ್ವ ಯುವಕ ಮತ್ತು ಓರ್ವ ಯುವತಿಯನ್ನು ಮನೆಗೆ ಕರೆತಂದು, "ಸ್ವಲ್ಪ ಕಾಲ ನಮ್ಮ ಮನೆಯಲ್ಲಿಯೇ ಇರುವ ಇವರಿಬ್ಬರಿಗೂ ಹೊತ್ತುಹೊತ್ತಿಗೆ ಸ್ನಾನ, ಆಹಾರ, ನಿದ್ದೆಗೆ ವ್ಯವಸ್ಥೆ ಮಾಡುವುದು ನಿನ್ನ ಕೆಲಸ" ಎಂದು ನಮ್ಮಮ್ಮನಿಗೆ ಹೇಳಿದಾಗ ನಮ್ಮಜ್ಜಿ ಅಲ್ಲಿರಲಿಲ್ಲ. ಪ್ರಾಯಶಃ ಅಂಗಡಿಯಲ್ಲಿ ಕಸ ಗುಡಿಸಿ ಒರೆಸಲು ನಿಯುಕ್ತರಾಗಿದ್ದ ಆ ಗಂಡ - ಹೆಂಡತಿ ಉಪಚಾರವನ್ನು ತಿಂಗಳುಗಟ್ಟಲೆ ನಮ್ಮಮ್ಮ ಚಾಚೂ ತಪ್ಪದೆ ನಿರ್ವಹಿಸಿದರು.

ಇನ್ನೊಂದು ಸಲ ನಮ್ಮಪ್ಪ ಅಂಗಡಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ಓರ್ವ ದರ್ಜಿಯನ್ನು ಮನೆಗೆ ಕರೆತಂದು, "ಪ್ರತಿದಿನ ಮಧ್ಯಾಹ್ನ ಇವನಿಗೆ ಅಡುಗೆ ಮಾಡಿ ಹಾಕಿ, ಇವನ ಕೈಲೇ ನನ್ನ ಮಧ್ಯಾಹ್ನದ ಊಟವನ್ನು ಡಬ್ಬಿಗೆ ಹಾಕಿ ಕಳಿಸು" ಎಂಬ ಆದೇಶ ನೀಡಿದಾಗಲೂ ನಮ್ಮಜ್ಜಿ ಮನೆಯಲ್ಲಿ ಇರಲಿಲ್ಲ. ಊಟ ಮಾಡುವಾಗ ಪದೇಪದೇ ಹೋಳು ಹಾಕಿಸಿಕೊಂಡು, ಮನೆಯಲ್ಲಿ ಉಳಿದವರಿಗೆ ಹೋಳಿಲ್ಲದ ಸಾರೇ ಗತಿ ಎಂಬ ಪರಿಸ್ಥಿತಿ ಉಂಟುಮಾಡುತ್ತಿದ್ದ ಆತನಿಗೂ ಲೋಪವಿಲ್ಲದಂತೆ ನಮ್ಮಮ್ಮ ಉಪಚಾರ ಮಾಡಿದರು.

ನಮ್ಮಮ್ಮನಿಗೆ ಗಣನೆಗೆ ಸಿಗದಷ್ಟು ಸಂಖ್ಯೆಯಲ್ಲಿ ವೈವಾಹಿಕ ಜೀವನದುದ್ದಕ್ಕೂ ಇಂಥ ಸನ್ನಿವೇಶಗಳು ಎದುರಾಗುತ್ತಲೇ ಇದ್ದವು.


Tuesday 20 February 2024

ಬದುಕಿನ ಹಾದಿ - 2

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಹಕ್ಕುಗಳನ್ನು ಪ್ರತಿಪಾದಿಸುವುದರಿಂದ ಸಂತೋಷ ಸಾಧಿಸಲಾಗುವುದಿಲ್ಲ, ಅರ್ಧ ದಾರಿಯಲ್ಲಿ ನಿಂತುಬಿಡುವುದರಿಂದ ಗಮ್ಯಸ್ಥಾನವನ್ನು  ತಲುಪಲಾಗುವುದಿಲ್ಲ. ಸ್ವಂತ ಶಕ್ತಿಯ ಮೇಲೂ ಪ್ರಕೃತಿ ನಿಯಾಮಕದ ಮೇಲೂ ಭರವಸೆ ಇರಿಸಿ ಮುಂದುವರಿಯುತ್ತಿದ್ದರೆ, ಸರಿಯಾದ ಸಮಯ ಬಂದಾಗ ಇಂಗಿತವು ಈಡೇರುತ್ತದೆ.

ಸೌಮ್ಯ ಸ್ವಭಾವ ಹೊಂದಿದ್ದರೆ ಜನ ನಮ್ಮ ಹತ್ತಿರಕ್ಕೆ ಬರುತ್ತಾರೆ. ದಬ್ಬಾಳಿಕೆ ಪ್ರದರ್ಶಿಸಿದರೆ ಜನ ನಮ್ಮಿಂದ ದೂರ ಹೋಗುತ್ತಾರೆ. ಬಾಲ್ಯದಲ್ಲಿ ನೋಡಿದ್ದ ಸದರಿ ತದ್ವಿರುದ್ಧ ವ್ಯಕ್ತಿತ್ವದ ಈರ್ವರನ್ನು, ಆ ನಂತರದ ವರ್ಷಗಳಲ್ಲಿ ಇದುವರೆಗೆ ನೇರವಾಗಿ ಭೇಟಿಯಾಗದಿದ್ದರೂ ಅವರ ನೆನಪು ನನ್ನ ಮನಸ್ಸಿನಲ್ಲಿನ್ನೂ ಹಸಿರಾಗಿಯೇ ಇದೆ.

ಸುಲಭವಾಗಿ ನಡೆಯಲು ಸಾಧ್ಯವಾಗದಷ್ಟು ಕಾಲಿನ ತೊಂದರೆ ಇರುವ ನಮ್ಮಮ್ಮ ಹೆಚ್ಚು ಸಮಯವನ್ನು ವ್ಯಯಿಸುವುದು ಕಿರುತೆರೆ ವೀಕ್ಷಣೆಯಲ್ಲಿಯೇ. ಅವರು ಕರೆದಾಗ ಎಲ್ಲಿದ್ದರಲ್ಲಿಂದ ಓಡಿ ಬಂದು ಅವರ ಅಗತ್ಯಗಳನ್ನು ಪೂರೈಸುವುದು ನನ್ನ ದಿನನಿತ್ಯದ ಅಭ್ಯಾಸ. ಇದೇ ಥರ, ಬಾಲ್ಯದಲ್ಲಿ ಅಜ್ಜಿ (ನಮ್ಮಮ್ಮನ ಅಮ್ಮ) ಸಂಗಡವಿದ್ದು, ಕಣ್ಣಿನ ತೊಂದರೆ ಅನುಭವಿಸುತ್ತಿದ್ದ ಅವರನ್ನು ಅವರ ಇಚ್ಛೆಯ ಮೇರೆಗೆ ಎಲ್ಲಿಗೇ ಆದರೂ ಕರೆದುಕೊಂಡು ಹೋಗುವ ಅಭ್ಯಾಸ ನನ್ನಲ್ಲಿ ಬೆಳೆದುಬಂದಿತ್ತು.

ನಮ್ಮ ದೂರದ ಸಂಬಂಧಿ ಚಿಂಗಾಮಣಿ (ಇದು ಅವರನ್ನು ಮುದ್ದಾಗಿ ಕರೆಯುತ್ತಿದ್ದ ಹೆಸರಿರಬಹುದು. ಅವರ ನಿಜವಾದ ಹೆಸರು ನನಗೆ ಗೊತ್ತಿಲ್ಲ) ಯವರ ಮನೆ ನಮ್ಮ ಅಜ್ಜಿಯನ್ನು ನಾನು ಕರೆದುಕೊಂಡು ಹೋಗುತ್ತಿದ್ದ ವಾಡಿಕೆಯ ಸ್ಥಳ. ನಮ್ಮ ಅಜ್ಜಿ ಮುಖ್ಯವಾದ ವಿಷಯಗಳ ಬಗ್ಗೆ ಚಿಂಗಾಮಣಿಯವರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅವರ ಮಕ್ಕಳಾದ ಇಂದುಮತಿ ಹಾಗೂ ಗೀತಾಬಾಲಿ ನನ್ನೊಂದಿಗೆ ಸಂಭಾಷಿಸುತ್ತ ಇರುತ್ತಿದ್ದರು.

ಇಂದುಮತಿ ನನ್ನ ಸಹಪಾಠಿ, ಮೈಸೂರು ಚಾಮುಂಡೀಪುರದ  ಸಿಮೆಂಟ್ ಬ್ಲಾಕ್ ಪ್ರಾಥಮಿಕ ಶಾಲೆಯಲ್ಲಿ ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ. "ಸೌಮ್ಯ ಸ್ವಭಾವ ಹೊಂದಿದ್ದರೆ ಜನ ನಮ್ಮ ಹತ್ತಿರಕ್ಕೆ ಬರುತ್ತಾರೆ" ಎಂದು ಮೇಲೆ ಸೂಚಿಸಿದ ವಾಕ್ಯವನ್ನು ಆಕೆಗೆ ಅನ್ವಯಿಸಬಹುದು. ಅನೇಕ ವಿದ್ಯಾರ್ಥಿಗಳು ಸಲಹೆ - ಸಮಾಧಾನಗಳಿಗಾಗಿ ಆಕೆಯನ್ನು ಸಂಪರ್ಕಿಸುತ್ತಿದ್ದುದು ನಿತ್ಯದೃಶ್ಯ. ಇಂದುಮತಿ ತರುತ್ತಿದ್ದ ಊಟದ ಡಬ್ಬಿಗೆ ಆ ಶಾಲೆಯಲ್ಲಿ ನಾನು ಕಲಿಯುತ್ತಿದ್ದ ಅವಧಿಯಲ್ಲಿ ಸದಾ ಭಾಗಿಯಾಗಿರುತ್ತಿದ್ದೆ.

ಆರಂಭದಲ್ಲಿ ತಿಳಿಸಿದ "ದಬ್ಬಾಳಿಕೆ ಪ್ರದರ್ಶಿಸಿದರೆ ಜನ ನಮ್ಮಿಂದ ದೂರ ಹೋಗುತ್ತಾರೆ" ಎಂಬ ವಾಕ್ಯವನ್ನು ಹೋಲುವ ವ್ಯಕ್ತಿ ಆಗ್ಗೆ ಚಾಮುಂಡೀಪುರಂ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಮಾಸ್ಟರ್ ಆಗಿದ್ದವರು (ಅವರ ಹೆಸರನ್ನು ಮರೆತಿದ್ದೇನೆ). ಆ ಶಾಲೆಯ ಮುಖ್ಯ ಉಪಾಧ್ಯಾಯರು ನನ್ನನ್ನು ಪರೀಕ್ಷಿಸಿ ದಾಖಲಿಸಲು ಬಂದಿದ್ದ ನಮ್ಮಮ್ಮನನ್ನು ಕುರಿತು, 'ಇವನನ್ನು ನೇರವಾಗಿ ಆರನೇ ತರಗತಿಗೆ ದಾಖಲಿಸಬಹುದು' ಎನ್ನುವ ಮೂಲಕ ಒಂದು ವರ್ಷದ ಕಲಿಕೆಯ ರಿಯಾಯಿತಿ ನೀಡಿದರು.

ಹಿಂದಿ, ಹೈಜಿಯನ್ ಪೈಕಿ ಒಂದನ್ನು ಆರಿಸಿಕೊಂಡು ಕಲಿಕೆ ಆರಂಭಿಸುವ ನಿಯಮ ಇದ್ದುದರಿಂದ ನಾನು ಹಿಂದಿ ಕಲಿಕೆಗೆ ಒಪ್ಪಿಗೆ ಸೂಚಿಸಿದೆ. ತರುವಾಯ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ಮುಖ್ಯ ಉಪಾಧ್ಯಾಯರು ಸೇವಕನ ಸಂಗಡ ನನ್ನನ್ನು ಹಿಂದಿ ತರಗತಿ ನಡೆಯುತ್ತಿದ್ದ ಸ್ಥಾನಕ್ಕೆ ನನ್ನನ್ನು ಕಳುಹಿಸಿಕೊಟ್ಟರು. ಸೇವಕ ದೂರದಿಂದ ಬೆರಳನ್ನು ಗುರಿ ಮಾಡಿ ತೋರಿಸುತ್ತ, 'ಅದೋ ಹಿಂದಿ ಕ್ಲಾಸ್' ಎಂದು ಹೇಳಿ ಹೋಗಿಬಿಟ್ಟ.

ಹಿಂದಿ ಕ್ಲಾಸ್ ಒಳಕ್ಕೆ ಹೋಗದಂತೆ ನನ್ನನ್ನು ಬಾಗಿಲಿನಲ್ಲೇ ತಡೆದು ನಿಲ್ಲಿಸಲಾಯಿತು. ತಡೆದು ನಿಲ್ಲಿಸಲ್ಪಟ್ಟ ಇನ್ನೂ ಮೂರು ಮಂದಿ ವಿದ್ಯಾರ್ಥಿಗಳು ಅಲ್ಲಿದ್ದರು. ಕೆಲವು ನಿಮಿಷಗಳ ನಂತರ ಅಧ್ಯಾಪಕರು ನಮ್ಮ ಸಮೀಪಕ್ಕೆ ಬಂದು, ಸಾಲಿನ ಮೊದಲನೆಯವನು ಬಲ ಅಂಗೈ ಚಾಚುವಂತೆ ಪ್ರಚೋದಿಸುತ್ತ 'ಯಾಕೆ ಲೇಟು' ಎಂದು ಕೇಳಿ ಅವನು ಉತ್ತರಿಸುವ ಮುನ್ನವೇ ತಮ್ಮ ಕೈಲಿದ್ದ ಬೆತ್ತದಿಂದ ಬಾರಿಸಿದರು. ಆ ಏಟಿನ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ 'ಹೋಮ್ ವರ್ಕ್ ಮಾಡಿದ್ದೀಯಾ' ಎಂಬ ಪ್ರಶ್ನೆ ಎದುರಾಗಿ ಅವನ ಮತ್ತೊಂದು ಕೈಗೂ ಬೆತ್ತದ ಬಲವಾದ ಹೊಡೆತ ಬಿತ್ತು. ಸಾಲಿನಲ್ಲಿದ್ದ ಇತರರಿಗೂ ಅದೇ ಗತಿಯಾದ ಬಳಿಕ ನನ್ನ ಸರದಿ ಬಂತು. ಕ್ಷಣಗಳ ಮುನ್ನವಷ್ಟೇ ಶಾಲೆಗೆ ದಾಖಲಾದ ನನಗೆ ಆ ಶಿಕ್ಷೆ ಅನ್ವಯಿಸುವುದಿಲ್ಲವೆಂದು ಚೀರಿ ಚೀರಿ ಹೇಳಿದರೂ ಕೇಳದೆ ನನ್ನ ಕೈಗಳನ್ನೂ ಊದಿಸಿ ಕಳಿಸಿದರು. ಅಂದು ಬಂದ ಜ್ವರ ಮೂರು ದಿನಗಳ ಕಾಲ ನನ್ನನ್ನು ಕಾಡಿಸಿತು.

ನಾನು ಚೇತರಿಸಿಕೊಂಡ ನಂತರ ಶಾಲೆಗೆ ಕರೆತಂದ ಅಮ್ಮ, ನನ್ನ ಒತ್ತಾಯದ ಮೇರೆಗೆ ಮುಖ್ಯ ಉಪಾಧ್ಯಾಯರ ಸಂಗಡ ಚರ್ಚಿಸಿ, ಹಿಂದಿಯ ಬದಲು ಹೈಜಿಯನ್ optionalನೊಂದಿಗೆ ನಾನು ಓದನ್ನು ಮುಂದುವರಿಸುವ ಅನುಕೂಲ ಕಲ್ಪಿಸಿದರು. 

Sunday 18 February 2024

ಬದುಕಿನ ಹಾದಿ - 1

(ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು)

(ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು)

ಲಿಂಕ್ https://virendrakumarkochar.blogspot.com/ ಮುಖೇನ ತೆರೆದುಕೊಳ್ಳುವ ಅಂತರ್ಜಾಲ ಅಂಚೆಗಳ ಸರಣಿಯು ಉಲ್ಲೇಖಿಸುತ್ತಿರುವ ಶುಭಾಶಯಗಳು ಜೀವನದ ಅರ್ಥವನ್ನು ಹೆಚ್ಚಿಸಲು ಪ್ರೇರಕವಾಗಿವೆ. ಇದನ್ನು ಕುರಿತು ನನ್ನ ಸಂಪರ್ಕದಲ್ಲಿರುವ ಬಂಧುಮಿತ್ರರಿಗೆ ನಾನಿಂತು ಅದೇಶಿಸಿದೆ:

ನಮ್ಮ ಹೆಸರಿನೊಂದಿಗೆ ನಿಯಮಿತವಾಗಿ ಅಂತಹ ಶುಭಾಶಯಗಳನ್ನು ಸಂಯೋಜಿಸುವ ಮತ್ತು ನಮ್ಮನ್ನು ವಿಶೇಷ ವ್ಯಕ್ತಿಗಳನ್ನಾಗಿ ಚಿತ್ರಿಸುವ ಕುಟುಂಬ್ ಅಪ್ಲಿಕೇಶನ್‌ಗೆ ಅಂತ್ಯವಿಲ್ಲದ ನಮನ.

ಮಹತ್ವಾಕಾಂಕ್ಷಿ ಬರಹಗಾರರು ಈ ಶುಭಾಶಯಗಳನ್ನು ತಮ್ಮ ಜೀವನದ ನಾನಾ ಪ್ರಸಂಗಗಳಿಗೆ ಅನ್ವಯಿಸಿ, ತಮಗೆ ಅನುಕೂಲವಾದ ಭಾಷೆಯಲ್ಲಿ ಬರೆಯುವ ಮೂಲಕ ತಮ್ಮ ಜೀವನಚರಿತ್ರೆಯನ್ನು ರಚಿಸಬಹುದು, ಹಾಗೂ ರತ್ನಾಕರ್ ಅವರಂಥ ಪ್ರಕಾಶಕರ ಉಚಿತ ಬೆಂಬಲದ ಮೂಲಕ (ಮೊಬೈಲ್ # 8884540400) ಪ್ರಸಿದ್ಧರಾಗಬಹುದು.

ಅಂಥ ಜೀವನಚರಿತ್ರೆಗಳನ್ನು ಆರಂಭದಲ್ಲಿ ಅನೇಕ ಅಧ್ಯಾಯಗಳ ರೂಪದಲ್ಲಿ ಪ್ರಕಟಿಸಲು ಕೆಲವು ಬ್ಲಾಗರ್ ಖಾತೆಗಳ ರಚನೆಗೆ ನಾನೂ ತೊಡಗಿಕೊಳ್ಳುವ ಮೂಲಕ ಕುಟುಂಬ್ ಅಪ್ಲಿಕೇಶನ್‌ಗೆ ಹೆಚ್ಚಿನ ಪ್ರಚಾರ ಒದಗಿಸಲು ಯತ್ನಿಸಬಹುದು.

ಮೇಲಿನಂತೆ ಹತ್ತು ಹಲವರಿಗೆ ರವಾನಿಸಿದ ಆದೇಶಕ್ಕೆ ಅನುಗುಣವಾಗಿ, ಸ್ವತಃ ಕೆಲಸ ಮಾಡಿ ನಿದರ್ಶನ ಒದಗಿಸಬೇಕಾದ್ದು ಅತ್ಯಗತ್ಯ. ಆ ಮೇರೆಗೆ ಮುಂದಡಿಯಿಡುತ್ತ ಒಂದು ಗ್ರಂಥದ ರಚನೆಯನ್ನು ಇದೋ ಆರಂಭಿಸುತ್ತಿದ್ದೇನೆ.

ಮೇಲ್ಕಂಡ ಉಕ್ತಿಯ ಅರ್ಥ: ನಾನು ಕಲ್ಲು, ನನ್ನ ತಂದೆ-ತಾಯಿಗಳು ನನ್ನ ಕುಶಲಕರ್ಮಿಗಳು, ಆದ್ದರಿಂದ ಅವರು ನನ್ನ ಎಲ್ಲಾ ಪ್ರಶಂಸೆಗೆ ಅರ್ಹರು. ಈ ಘೋಷವಾಕ್ಯ, ನಾವು ಎಸಗುವ ಹಿರಿಯರ ಸೇವೆಯಲ್ಲಿ ಲೋಪವಿರಬಾರದು ಎಂದು ಸೂಚಿಸುತ್ತದೆ.

ಮೂರ್ತಿಪೂಜೆ ಅರ್ಥಹೀನವೆಂದು ವಾದಿಸುವವರಿಗೆ ನಮ್ಮಮ್ಮ ನೀಡುವ ಸಮಾಧಾನವನ್ನು ಗಮನಿಸಿ: ಸಕಲ ಸೌಲಭ್ಯಗಳಿಗೆ ಕಾರಣವಾದ, ಅರ್ಹರಲ್ಲದಿದ್ದರೂ ಸಮಸ್ತವನ್ನೂ ನಿರ್ವಂಚನೆಯಿಂದ ನಮಗೆ ಒದಗಿಸಿ, ಸುಖದುಃಖಗಳ ಸರಮಾಲೆ ಧರಿಸಿ ಮುನ್ನುಗ್ಗಲು ಅನುವು ಮಾಡಿಕೊಡುವ ಪ್ರಕೃತಿಗೆ ಒಂದು ಸಾಮಾನ್ಯವಾದ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವಲ್ಲವೇ? ಆಲೋಚನೆಯ ಸಾಮರ್ಥ್ಯ ಇಲ್ಲದ ನಾಯಿಗೆ ಒಂದು ಹಿಡಿ ಅನ್ನ ಹಾಕಿದರೂ ಅದು ಬದುಕಿನುದ್ದಕ್ಕೂ ನಮಗೆ ಕೃತಜ್ಞತೆ ಸಲ್ಲಿಸುವುದು ಕಾಣದೆ? ಬುದ್ಧಿಜೀವಿಗಳಾದ ನಾವಿನ್ನೆಷ್ಟು ಕೃತಜ್ಞರಾಗಿರಬೇಡ? ಕೆಳಕಂಡ ವಿಡಿಯೋ ಗಮನಾರ್ಹ!

https://youtu.be/J0ocUXjlB1w?si=M1dNSpYkX7Zf6y1j

ರಸ್ತೆ ಬದಿ, ಜಲಪಾತದ ತುದಿ ಮುಂತಾಗಿ ಎಲ್ಲಿದ್ದರೆ ಅಲ್ಲಿಂದಲೇ ಅಗಾಧವಾದ, ಅಸದೃಶ ಬೆಡಗಿನ ಪ್ರಕೃತಿಗೆ ನಾವು ನಮ್ಮ ಕೃತಜ್ಞತೆ ಸಲ್ಲಿಸಬಹುದು. ಮನಃಪೂರ್ವಕವಾಗಿ ಸಲ್ಲಿಸುವ ಕೃತಜ್ಞತೆ ಉಲ್ಲಾಸವನ್ನುಂಟುಮಾಡುವುದು ನಿರ್ವಿವಾದ. ಆದರೆ ಬಹುತೇಕರು ಏಕಾಗ್ರತೆಯ ಉದ್ದೇಶದಿಂದ ಪ್ರಕೃತಿಯನ್ನು ತಮ್ಮ ಸ್ವರೂಪ ಹೇಗಿರುವುದೋ ಹಾಗೆಯೇ, ಉಡುಗೆತೊಡುಗೆ - ಆಭರಣಗಳಿಂದ ಸಜ್ಜುಗೊಳಿಸಿ ಆರಾಧಿಸುವ ಅಪೇಕ್ಷೆ ಹೊಂದುವುದು ಸೂಕ್ತವೇ. ಎಲ್ಲೆಲ್ಲೂ ದೇವಸ್ಥಾನ, ಚರ್ಚುಗಳಲ್ಲಿ ನೆರೆದಿರುವ ಜನಸ್ತೋಮ ಅಂಥ ಅಪೇಕ್ಷೆಯ ಸಂಕೇತವಲ್ಲದೆ ಬೇರಲ್ಲ.

ಪ್ರಕೃತಿಯನ್ನು ತನಗಿಷ್ಟವಾದ ವಿವಿಧ ನಾಮಗಳಿಂದ ಸ್ಮರಿಸುತ್ತಲೇ ಮುಂಜಾನೆ ಏಳುವುದು ನಮ್ಮಮ್ಮನಿಗೆ ತುಂಬಾ ಇಷ್ಟ. ಅದಕ್ಕೆ ಅನುಗುಣವಾಗಿ ಬೆಳಗಿನ ಅರಕ್ಕೂ ಮುನ್ನ ಅವರು ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ಗಜೇಂದ್ರ ಮೋಕ್ಷ, ಕನಕಧಾರಾ ಸ್ತೋತ್ರ ಮುಂತಾದುವನ್ನು ಆಲಿಸಲು ಅನುಕೂಲ ಮಾಡಿಕೊಡುವುದು ನನ್ನ ಅಭ್ಯಾಸ.

ಈ ದಿನ ಅಮ್ಮ ಎಂದಿಗಿಂತ ಮುಂಚಿತವಾಗಿ ಎದ್ದು, ಭಾಗವತದಲ್ಲಿ ಸಂಭವಿಸುವ ಕೃಷ್ಣ - ಕುವಲಯಾಪೀಡ ಸಂಗ್ರಾಮದ ವಿಡಿಯೋ (Link: https://youtu.be/QpTHdmeeC5E?si=jlUPlTleXBb5vzen) ವನ್ನು ವೀಕ್ಷಿಸುವ ಅಪೇಕ್ಷೆ ವ್ಯಕ್ತಪಡಿಸಿದರು. ಇದಕ್ಕೂ, ವಾಡಿಕೆಯ ಸ್ತೋತ್ರಗಳ ಆಲಿಕೆಗೂ ತಕ್ಕ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾರ್ನಿಂಗ್ ವಾಕ್ ಸಲುವಾಗಿ ನಾನು ಹೊರಟೆ. ಮುಂಜಾನೆ ಸಮಯದಲ್ಲಿ ವಾಕ್ ಮಾಡಿದಾಗ ಲವಲವಿಕೆ ಸಂಜೆಗಿಂತ ಹೆಚ್ಚಾಗಿರುವ ಅನುಭವ ನಿಶ್ಚಿತ.