Sunday 25 February 2024

ಬದುಕಿನ ಹಾದಿ - 5

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಮನ ಮೆಚ್ಚುವಂತಿರುವುದು ಮತ್ತು ಮನದಿಂದ ದೂರಾಗುವುದು ಮನುಷ್ಯನ ನಡವಳಿಕೆಯನ್ನು ಅವಲಂಬಿಸಿರುತ್ತದೆ.

ಸುಖದುಃಖಗಳಿಲ್ಲದೆ ಸಂಸಾರವಿಲ್ಲ. ಸುಖಾಂತದುಃಖಾಂತಗಳನ್ನು ಉಪದೇಶಿಸದ ಧರ್ಮಗ್ರಂಥಗಳಿಲ್ಲ. ಸುಖ ನೆಮ್ಮದಿಯನ್ನು ನೀಡುತ್ತದೆ, ದುಃಖವು ಪಾಠ ಕಲಿಸುತ್ತದೆ. ಪಾಠ ಕಲಿತು ಪ್ರಾಜ್ಞರಾದರೆ ನೆಮ್ಮದಿಯ ಬದುಕು ನಮ್ಮದಾಗುತ್ತದೆ.

ಧರ್ಮಗ್ರಂಥಗಳನ್ನು ಅರೆದು ಕುಡಿದಿದ್ದ ನಮ್ಮಜ್ಜ (ಅಪ್ಪನ ಅಪ್ಪ) ಬಾಹ್ಯ ಜಗತ್ತಿನಲ್ಲಿ ಪ್ರಕಾಂಡ ಪಂಡಿತನೆಂಬ ಹೊಗಳಿಕೆಗೆ ಪಾತ್ರರಾಗಿದ್ದರೂ, ಮನೆಯವರ ಮಟ್ಟಿಗೆ ಮೃತ್ಯುಸ್ವರೂಪಿಯಾಗಿದ್ದುದು ನಂಬಲಾರದ ಸತ್ಯ. ಅವರೊಂದಿಗೆ ಮನೆಯಲ್ಲಿದ್ದವರು ಪರಮ ಯಾತನೆಯಿಂದ ಬದುಕಲಾರದೆ ಬದುಕಿದರೆ, ಮನೆ ಬಿಟ್ಟು ಹೋದ (ದಶಕಗಳ ನಂತರ ಆತ ಇನ್ನಿಲ್ಲವೆಂಬುದನ್ನು ಖಚಿತಪಡಿಸಿಕೊಂಡೇ ಹಿಂದಿರುಗಿದ) ನಮ್ಮಪ್ಪ ಮತ್ತು ಚಿಕ್ಕಪ್ಪ ತಮ್ಮ ಹಣೆಯಲ್ಲಿ ಬರೆದಿದ್ದಂಥ ಬುದ್ಧಿ ಕಲಿತದ್ದು ಕೇವಲ ಅಲೆಮಾರಿಗಳಾಗಿಯೇ.

ಆಗ್ಗೆ ಊಟದ ಸಮಯದಲ್ಲಿ 'ನಾರಾಯಣಾಯ ನಮಃ' ಎಂದು ಉಚ್ಚರಿಸಿದ ನಂತರವೇ ಪ್ರತಿಯೊಂದು ತುತ್ತು ಆಹಾರವನ್ನು ಬಾಯಿಗೆ ಇರಿಸತಕ್ಕದ್ದು ಎಂಬ ನಿಯಮ ನಮ್ಮ ಕುಟುಂಬಕ್ಕೆ ಅನ್ವಯವಾಗುತ್ತಿತ್ತು. ಆ ನಿಯಮ ಮೀರಿದವರು ನಮ್ಮಜ್ಜನ ಕಠಿಣ ಶಿಕ್ಷೆಗೆ ಗುರಿಯಗುತ್ತಿದ್ದರು. ಸುಮಾರು ಹತ್ತು ವರ್ಷ ವಯಸ್ಸಾಗಿದ್ದ ನಮ್ಮಪ್ಪ ಒಂದು ದಿನ ಮರೆತು ಒಂದು ತುತ್ತನ್ನು ಬಾಯಿಗಿಟ್ಟ ತಕ್ಷಣ ಧಾವಿಸಿದ ನಮ್ಮಜ್ಜ ಬಲವಾಗಿ ಮುಖಕ್ಕೆ ಗುದ್ದಿದರಂತೆ. ಇನ್ನೂ ಧೃಡವಾಗಿರದ ಅವರ ಮೇಲೊಸಡಿನ ಎರಡು ಹಲ್ಲುಗಳು ಕಳಚಿಕೊಂಡು ಅವರ ಊಟದ ತಟ್ಟೆಯೊಳಕ್ಕೆ ಬಿದ್ದುವಂತೆ. 'ಇನ್ನೀ ದೌರ್ಜನ್ಯವನ್ನು ಎದುರಿಸಲಾರೆ' ಎಂದು ಆ ದಿನ ಮನೆ ಬಿಟ್ಟ ನಮ್ಮಪ್ಪ ಹಿಂದಿರುಗಿದ್ದು ನಮ್ಮಜ್ಜ ಮರಣಿಸಿದ ನಂತರವೇ. ಮುಂದೊಂದು ದಿನ ಅದೇ ಥರದ ಸನ್ನಿವೇಶ ಏರ್ಪಟ್ಟು ನಮ್ಮ ಚಿಕ್ಕಪ್ಪನೂ ಮನೆ ಬಿಟ್ಟು ಹೋಗುವುದು ಅನಿವಾರ್ಯವಾಯಿತಂತೆ.

ರೈಲ್ವೆ ಇಲಾಖೆಯ ಪ್ರಯಾಣಿಕರ ಟಿಕೆಟ್ ತಪಾಸಕ (TTE) ಹುದ್ದೆಯಿಂದ ನಿವೃತ್ತರಾಗುವ ಮುನ್ನ ಆ ಹುದ್ದೆಯನ್ನು ನಮ್ಮಪ್ಪನಾಗಲಿ, ಚಿಕ್ಕಪ್ಪನಾಗಲಿ ನಿರ್ವಹಿಸುತ್ತ ಮುಂದುವರಿಯಲು ಸಾಧ್ಯವಿದ್ದಂಥ ಸೌಲಭ್ಯವನ್ನು ಸಹಾ ಕೈಬಿಟ್ಟು ನಮ್ಮಜ್ಜ ತಮ್ಮ ನಿರ್ದಯ ಮನಸ್ಸಿನ ಒಂದು ಮಗ್ಗುಲನ್ನು ಪ್ರದರ್ಶಿಸಿದರು. ಅಲ್ಲದೆ, ನಿವೃತ್ತಿ ಸಮಯದ ಅಸುಪಾಸಿನಲ್ಲಿ ಪೂರ್ವಜರ ಆಸ್ತಿಯಾದ ಕಾಫಿ ತೋಟದ ಒಂದು ಪಾಲು ತಮಗೆ ದೊರೆತಾಗ ಅದನ್ನು ಮುಂದಿನ ಪೀಳಿಗೆಗೋಸ್ಕರ ಸಂರಕ್ಷಿಸದೆ ಮಾರಾಟ ಮಾಡಿ, ದೊರೆತ ಧನರಾಶಿಯನ್ನು ಕುದುರೆ ರೇಸುಗಳ ಮೇಲೆ ಹೂಡಿ ಹಾಳುಮಾಡಿದರು. ಅದೇ ಸಂದರ್ಭದಲ್ಲಿ (ಚಿಕ್ಕಮಗಳೂರು ಸಮೀಪದ ಚೀಕನಹಳ್ಳಿಯಲ್ಲಿರುವ 'ಕೋಗೋಡ್ ಎಸ್ಟೇಟ್' ಎಂಬ ಖ್ಯಾತನಾಮವುಳ್ಳ) ಆ ಕಾಫಿ ತೋಟದ ಇನ್ನೊಂದು ಪಾಲಿನ ಹಕ್ಕುದಾರನಾದ ನಮ್ಮ ಚಿಕ್ಕಜ್ಜ ಅದರ ಸದುಪಯೋಗಕ್ಕೆ ಮುಂದಾಗಿ, ಮೈಸೂರಿನ ಒಂಟಿಕೊಪ್ಪಲಿನಲ್ಲಿ 'ಕೋಗೋಡ್ ಹೌಸ್' ಎಂಬ ವಿಖ್ಯಾತ ಬಂಗಲೆಯೊಂದನ್ನು ನಿರ್ಮಿಸಿದರು. ಅಲ್ಲದೆ, ಬೆಂಗಳೂರಿನ ಪ್ರಪ್ರಥಮ 'ಸಿಟಿ ಮಾರ್ಕೆಟ್ ಸುರಂಗಮಾರ್ಗ' ನಿರ್ಮಿಸಿದ ಹೆಗ್ಗಳಿಕೆಯೂ ನಮ್ಮ ಚಿಕ್ಕಜ್ಜನ ಕುಟುಂಬಕ್ಕೆ ಸಲ್ಲುತ್ತದೆ.

ಬೇರೆಬೇರೆ ಸಂದರ್ಭಗಳಲ್ಲಿ ಮನೆ ಬಿಟ್ಟ ನಮ್ಮಪ್ಪ, ಚಿಕ್ಕಪ್ಪ ಬೇರೆಬೇರೆಯಾಗಿಯೇ ಗಲ್ಲಿಗಲ್ಲಿಗಳಲ್ಲಿ ಅಲೆಯುತ್ತ, ಎಲ್ಲೆಂದರಲ್ಲಿ ಉಂಡು ಮಲಗೇಳುತ್ತ ಅಂತಿಮವಾಗಿ ಕಲ್ಕತ್ತಾದ 'ದಾಸ್ ಫ್ಯಾಮಿಲಿ' ಆಶ್ರಯದಲ್ಲಿ ಪರಸ್ಪರ ಭೇಟಿಯಾಗಿ, ಟೈಲರಿಂಗ್ ಇತ್ಯಾದಿ ಕಸುಬುಗಳನ್ನು ತಮ್ಮದಾಗಿಸಿಕೊಂಡು, ಕನಿಷ್ಠ ಮೂರು ದಶಕಗಳ ತರುವಾಯ, ನಮ್ಮಜ್ಜ ಸತ್ತ ಸುದ್ದಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಕಂಡ ನಂತರ ಮನೆಗೆ ಹಿಂದಿರುಗಿದರಂತೆ.

No comments:

Post a Comment