Tuesday 20 February 2024

ಬದುಕಿನ ಹಾದಿ - 2

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಹಕ್ಕುಗಳನ್ನು ಪ್ರತಿಪಾದಿಸುವುದರಿಂದ ಸಂತೋಷ ಸಾಧಿಸಲಾಗುವುದಿಲ್ಲ, ಅರ್ಧ ದಾರಿಯಲ್ಲಿ ನಿಂತುಬಿಡುವುದರಿಂದ ಗಮ್ಯಸ್ಥಾನವನ್ನು  ತಲುಪಲಾಗುವುದಿಲ್ಲ. ಸ್ವಂತ ಶಕ್ತಿಯ ಮೇಲೂ ಪ್ರಕೃತಿ ನಿಯಾಮಕದ ಮೇಲೂ ಭರವಸೆ ಇರಿಸಿ ಮುಂದುವರಿಯುತ್ತಿದ್ದರೆ, ಸರಿಯಾದ ಸಮಯ ಬಂದಾಗ ಇಂಗಿತವು ಈಡೇರುತ್ತದೆ.

ಸೌಮ್ಯ ಸ್ವಭಾವ ಹೊಂದಿದ್ದರೆ ಜನ ನಮ್ಮ ಹತ್ತಿರಕ್ಕೆ ಬರುತ್ತಾರೆ. ದಬ್ಬಾಳಿಕೆ ಪ್ರದರ್ಶಿಸಿದರೆ ಜನ ನಮ್ಮಿಂದ ದೂರ ಹೋಗುತ್ತಾರೆ. ಬಾಲ್ಯದಲ್ಲಿ ನೋಡಿದ್ದ ಸದರಿ ತದ್ವಿರುದ್ಧ ವ್ಯಕ್ತಿತ್ವದ ಈರ್ವರನ್ನು, ಆ ನಂತರದ ವರ್ಷಗಳಲ್ಲಿ ಇದುವರೆಗೆ ನೇರವಾಗಿ ಭೇಟಿಯಾಗದಿದ್ದರೂ ಅವರ ನೆನಪು ನನ್ನ ಮನಸ್ಸಿನಲ್ಲಿನ್ನೂ ಹಸಿರಾಗಿಯೇ ಇದೆ.

ಸುಲಭವಾಗಿ ನಡೆಯಲು ಸಾಧ್ಯವಾಗದಷ್ಟು ಕಾಲಿನ ತೊಂದರೆ ಇರುವ ನಮ್ಮಮ್ಮ ಹೆಚ್ಚು ಸಮಯವನ್ನು ವ್ಯಯಿಸುವುದು ಕಿರುತೆರೆ ವೀಕ್ಷಣೆಯಲ್ಲಿಯೇ. ಅವರು ಕರೆದಾಗ ಎಲ್ಲಿದ್ದರಲ್ಲಿಂದ ಓಡಿ ಬಂದು ಅವರ ಅಗತ್ಯಗಳನ್ನು ಪೂರೈಸುವುದು ನನ್ನ ದಿನನಿತ್ಯದ ಅಭ್ಯಾಸ. ಇದೇ ಥರ, ಬಾಲ್ಯದಲ್ಲಿ ಅಜ್ಜಿ (ನಮ್ಮಮ್ಮನ ಅಮ್ಮ) ಸಂಗಡವಿದ್ದು, ಕಣ್ಣಿನ ತೊಂದರೆ ಅನುಭವಿಸುತ್ತಿದ್ದ ಅವರನ್ನು ಅವರ ಇಚ್ಛೆಯ ಮೇರೆಗೆ ಎಲ್ಲಿಗೇ ಆದರೂ ಕರೆದುಕೊಂಡು ಹೋಗುವ ಅಭ್ಯಾಸ ನನ್ನಲ್ಲಿ ಬೆಳೆದುಬಂದಿತ್ತು.

ನಮ್ಮ ದೂರದ ಸಂಬಂಧಿ ಚಿಂಗಾಮಣಿ (ಇದು ಅವರನ್ನು ಮುದ್ದಾಗಿ ಕರೆಯುತ್ತಿದ್ದ ಹೆಸರಿರಬಹುದು. ಅವರ ನಿಜವಾದ ಹೆಸರು ನನಗೆ ಗೊತ್ತಿಲ್ಲ) ಯವರ ಮನೆ ನಮ್ಮ ಅಜ್ಜಿಯನ್ನು ನಾನು ಕರೆದುಕೊಂಡು ಹೋಗುತ್ತಿದ್ದ ವಾಡಿಕೆಯ ಸ್ಥಳ. ನಮ್ಮ ಅಜ್ಜಿ ಮುಖ್ಯವಾದ ವಿಷಯಗಳ ಬಗ್ಗೆ ಚಿಂಗಾಮಣಿಯವರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅವರ ಮಕ್ಕಳಾದ ಇಂದುಮತಿ ಹಾಗೂ ಗೀತಾಬಾಲಿ ನನ್ನೊಂದಿಗೆ ಸಂಭಾಷಿಸುತ್ತ ಇರುತ್ತಿದ್ದರು.

ಇಂದುಮತಿ ನನ್ನ ಸಹಪಾಠಿ, ಮೈಸೂರು ಚಾಮುಂಡೀಪುರದ  ಸಿಮೆಂಟ್ ಬ್ಲಾಕ್ ಪ್ರಾಥಮಿಕ ಶಾಲೆಯಲ್ಲಿ ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ. "ಸೌಮ್ಯ ಸ್ವಭಾವ ಹೊಂದಿದ್ದರೆ ಜನ ನಮ್ಮ ಹತ್ತಿರಕ್ಕೆ ಬರುತ್ತಾರೆ" ಎಂದು ಮೇಲೆ ಸೂಚಿಸಿದ ವಾಕ್ಯವನ್ನು ಆಕೆಗೆ ಅನ್ವಯಿಸಬಹುದು. ಅನೇಕ ವಿದ್ಯಾರ್ಥಿಗಳು ಸಲಹೆ - ಸಮಾಧಾನಗಳಿಗಾಗಿ ಆಕೆಯನ್ನು ಸಂಪರ್ಕಿಸುತ್ತಿದ್ದುದು ನಿತ್ಯದೃಶ್ಯ. ಇಂದುಮತಿ ತರುತ್ತಿದ್ದ ಊಟದ ಡಬ್ಬಿಗೆ ಆ ಶಾಲೆಯಲ್ಲಿ ನಾನು ಕಲಿಯುತ್ತಿದ್ದ ಅವಧಿಯಲ್ಲಿ ಸದಾ ಭಾಗಿಯಾಗಿರುತ್ತಿದ್ದೆ.

ಆರಂಭದಲ್ಲಿ ತಿಳಿಸಿದ "ದಬ್ಬಾಳಿಕೆ ಪ್ರದರ್ಶಿಸಿದರೆ ಜನ ನಮ್ಮಿಂದ ದೂರ ಹೋಗುತ್ತಾರೆ" ಎಂಬ ವಾಕ್ಯವನ್ನು ಹೋಲುವ ವ್ಯಕ್ತಿ ಆಗ್ಗೆ ಚಾಮುಂಡೀಪುರಂ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಮಾಸ್ಟರ್ ಆಗಿದ್ದವರು (ಅವರ ಹೆಸರನ್ನು ಮರೆತಿದ್ದೇನೆ). ಆ ಶಾಲೆಯ ಮುಖ್ಯ ಉಪಾಧ್ಯಾಯರು ನನ್ನನ್ನು ಪರೀಕ್ಷಿಸಿ ದಾಖಲಿಸಲು ಬಂದಿದ್ದ ನಮ್ಮಮ್ಮನನ್ನು ಕುರಿತು, 'ಇವನನ್ನು ನೇರವಾಗಿ ಆರನೇ ತರಗತಿಗೆ ದಾಖಲಿಸಬಹುದು' ಎನ್ನುವ ಮೂಲಕ ಒಂದು ವರ್ಷದ ಕಲಿಕೆಯ ರಿಯಾಯಿತಿ ನೀಡಿದರು.

ಹಿಂದಿ, ಹೈಜಿಯನ್ ಪೈಕಿ ಒಂದನ್ನು ಆರಿಸಿಕೊಂಡು ಕಲಿಕೆ ಆರಂಭಿಸುವ ನಿಯಮ ಇದ್ದುದರಿಂದ ನಾನು ಹಿಂದಿ ಕಲಿಕೆಗೆ ಒಪ್ಪಿಗೆ ಸೂಚಿಸಿದೆ. ತರುವಾಯ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ಮುಖ್ಯ ಉಪಾಧ್ಯಾಯರು ಸೇವಕನ ಸಂಗಡ ನನ್ನನ್ನು ಹಿಂದಿ ತರಗತಿ ನಡೆಯುತ್ತಿದ್ದ ಸ್ಥಾನಕ್ಕೆ ನನ್ನನ್ನು ಕಳುಹಿಸಿಕೊಟ್ಟರು. ಸೇವಕ ದೂರದಿಂದ ಬೆರಳನ್ನು ಗುರಿ ಮಾಡಿ ತೋರಿಸುತ್ತ, 'ಅದೋ ಹಿಂದಿ ಕ್ಲಾಸ್' ಎಂದು ಹೇಳಿ ಹೋಗಿಬಿಟ್ಟ.

ಹಿಂದಿ ಕ್ಲಾಸ್ ಒಳಕ್ಕೆ ಹೋಗದಂತೆ ನನ್ನನ್ನು ಬಾಗಿಲಿನಲ್ಲೇ ತಡೆದು ನಿಲ್ಲಿಸಲಾಯಿತು. ತಡೆದು ನಿಲ್ಲಿಸಲ್ಪಟ್ಟ ಇನ್ನೂ ಮೂರು ಮಂದಿ ವಿದ್ಯಾರ್ಥಿಗಳು ಅಲ್ಲಿದ್ದರು. ಕೆಲವು ನಿಮಿಷಗಳ ನಂತರ ಅಧ್ಯಾಪಕರು ನಮ್ಮ ಸಮೀಪಕ್ಕೆ ಬಂದು, ಸಾಲಿನ ಮೊದಲನೆಯವನು ಬಲ ಅಂಗೈ ಚಾಚುವಂತೆ ಪ್ರಚೋದಿಸುತ್ತ 'ಯಾಕೆ ಲೇಟು' ಎಂದು ಕೇಳಿ ಅವನು ಉತ್ತರಿಸುವ ಮುನ್ನವೇ ತಮ್ಮ ಕೈಲಿದ್ದ ಬೆತ್ತದಿಂದ ಬಾರಿಸಿದರು. ಆ ಏಟಿನ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ 'ಹೋಮ್ ವರ್ಕ್ ಮಾಡಿದ್ದೀಯಾ' ಎಂಬ ಪ್ರಶ್ನೆ ಎದುರಾಗಿ ಅವನ ಮತ್ತೊಂದು ಕೈಗೂ ಬೆತ್ತದ ಬಲವಾದ ಹೊಡೆತ ಬಿತ್ತು. ಸಾಲಿನಲ್ಲಿದ್ದ ಇತರರಿಗೂ ಅದೇ ಗತಿಯಾದ ಬಳಿಕ ನನ್ನ ಸರದಿ ಬಂತು. ಕ್ಷಣಗಳ ಮುನ್ನವಷ್ಟೇ ಶಾಲೆಗೆ ದಾಖಲಾದ ನನಗೆ ಆ ಶಿಕ್ಷೆ ಅನ್ವಯಿಸುವುದಿಲ್ಲವೆಂದು ಚೀರಿ ಚೀರಿ ಹೇಳಿದರೂ ಕೇಳದೆ ನನ್ನ ಕೈಗಳನ್ನೂ ಊದಿಸಿ ಕಳಿಸಿದರು. ಅಂದು ಬಂದ ಜ್ವರ ಮೂರು ದಿನಗಳ ಕಾಲ ನನ್ನನ್ನು ಕಾಡಿಸಿತು.

ನಾನು ಚೇತರಿಸಿಕೊಂಡ ನಂತರ ಶಾಲೆಗೆ ಕರೆತಂದ ಅಮ್ಮ, ನನ್ನ ಒತ್ತಾಯದ ಮೇರೆಗೆ ಮುಖ್ಯ ಉಪಾಧ್ಯಾಯರ ಸಂಗಡ ಚರ್ಚಿಸಿ, ಹಿಂದಿಯ ಬದಲು ಹೈಜಿಯನ್ optionalನೊಂದಿಗೆ ನಾನು ಓದನ್ನು ಮುಂದುವರಿಸುವ ಅನುಕೂಲ ಕಲ್ಪಿಸಿದರು. 

No comments:

Post a Comment