Friday 8 March 2024

ಬದುಕಿನ ಹಾದಿ - 10

ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಸೋಲಿನ ಮೇಲೆ ಸೋಲು ಎದುರಾಗುತ್ತಿದ್ದರೂ ಧೈರ್ಯಗೆಡಬೇಡಿ, ಪರಿಸ್ಥಿತಿಗಳಿಗೆ ತಲೆಬಾಗದೆ ಕಾರ್ಯ ನಿರ್ವಹಿಸುತ್ತಿರಿ, ಸಂಕಲ್ಪವನ್ನೆಂದಿಗೂ ಕೈಬಿಡಬೇಡಿ.

ಅಮ್ಮನ ಆದೇಶಕ್ಕೆ ಓಗೊಟ್ಟು, ಹೆಂಡತಿಯ ಅಪೇಕ್ಷೆಗೆ ಅನುಗುಣವಾಗಿ, ಮಹಾರಾಷ್ಟ್ರ ಸರ್ಕಾರದ ನೌಕರಿ ತೊರೆದು ನಾನು ಕರ್ನಾಟಕಕ್ಕೆ ಹಿಂದಿರುಗಿದಾಗ ಖಾಸಗಿ ಕ್ಷೇತ್ರದಲ್ಲೂ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆಯುಳ್ಳವರಿಗೆ ಬೇಡಿಕೆ ಇರಲಿಲ್ಲ. ಅಪ್ಲೈ ಮಾಡಿದ್ದೂ ಮಾಡಿದ್ದೇ, ರಿಪ್ಲೈ ಬಾರದ್ದೂ ಬಾರದ್ದೇ ಎಂಬ ಏಕತಾನತೆ ಮೂರು ತಿಂಗಳ ಕಾಲ ನನ್ನನ್ನು ನಿರಾಶೆಯ ಹೊಂಡಕ್ಕೆ ದೂಡಿತ್ತು.

ಅನಂತರ ಆರ್ಕಿಟೆಕ್ಟ್ 'ವೆಂಕಟರಮಣನ್ ಅಸೋಸಿಯೇಟ್ಸ್' ವತಿಯಿಂದ ಸಂದರ್ಶನಕ್ಕೆ ಕರೆ ಬಂತು. ಹೋದಾಗ 'ಆರು ತಿಂಗಳ ಅವಧಿಯ ಹುದ್ದೆಯೊಂದಿದೆ, ನಿರ್ವಹಿಸ್ತೀರಾ' ಎಂದು ಕೇಳಲಾಯಿತು. ನನ್ನ ಒಪ್ಪಿಗೆಯ ನಂತರ ಕಚೇರಿ ಟಿಪ್ಪಣಿಯೊಂದನ್ನು ಹಸ್ತಾಂತರಿಸಿ 'ಫಾದರ್ ಡಾಮಿನಿಕ್' ಅವರನ್ನು ನೇರವಾಗಿ ಸಂಪರ್ಕಿಸುವಂತೆ ಸಲಹೆ ನೀಡಲಾಯಿತು. ಆ ಮೇರೆಗೆ 'ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್' ಎಂಬಲ್ಲಿಗೆ ತೆರಳಿದಾಗ, 'ಅವರು ಸನ್ಯಾಸಿನಿಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ, ಅವರಿಗೋಸ್ಕರ ನೀವು ಒಂದೆರಡು ಗಂಟೆ ಕಾಲ ಕಾಯಲು ಸಿದ್ದರಿದ್ದರೆ ಒಳ್ಳೆಯದೇ. ಇಲ್ಲವಾದರೆ ಹೋಗಬಹುದು ಎಂದು ಸೂಚಿಸಲಾಯಿತು.

ನನಗೆ ಕೆಲಸ ಬೇಕಿತ್ತು. ಆ ನಿಮಿತ್ತ ಎಷ್ಟೇ ಹೊತ್ತಾದರೂ ಕಾಯುತ್ತ ಅಲ್ಲಿರಲು ನಾನು ಸಿದ್ಧನಾದೆ. ಮಟಮಟ ಮಧ್ಯಾಹ್ನ 12 ಗಂಟೆಗೆ ಅಲ್ಲಿಗೆ ಹೋದ ನಾನು ಫಾದರ್ ಡಾಮಿನಿಕ್ ಅವರೊಂದಿಗೆ ಮೌನವಾಗಿ ಮುಖಾಮುಖಿಯಾದದ್ದು ಇರುಳು ಪರಿಸರವನ್ನು ವ್ಯಾಪಿಸಿದ ನಂತರವೇ. ವೆಂಕಟರಮಣನ್ ರವಾನಿಸಿದ ಕಚೇರಿ ಟಿಪ್ಪಣಿಯನ್ನು ಓದಿದ ಅವರು, ನನ್ನ ಅವತಾರವಾದರೂ ಹೇಗಿದೆ ಎಂದು ತಿಳಿದುಕೊಳ್ಳಲು ಯತ್ನಿಸದೆ, 'ನಾಳೆಯಿಂದ ಈತ ಕೆಲಸಕ್ಕೆ ಬರಲಿ' ಎಂದು ಆ ಟಿಪ್ಪಣಿಯ ಮೇಲೆ ಬರೆದು ಕ್ಷಣಾರ್ಧದಲ್ಲಿ ಹಿಂದಿರುಗಿದರು! 'ಈ ಸಂಪತ್ತಿಗೆ ನಾನು ಎಂಟು ಗಂಟೆ ಕಾಲ ಕಾಯುತ್ತ ಇಲ್ಲಿರಬೇಕಿತ್ತೆ' ಎಂಬೋಣವು ಮನದಲ್ಲಿ ಸುಳಿಯಿತಾದರೂ, ಶಬ್ದವನ್ನು ಹೊರಬೀಳಲು ಬಿಡದೆ, 'ನನ್ನ ಕೆಲಸವಾಯಿತಲ್ಲ' ಎಂದು ಸಮಾಧಾನ ತಂದುಕೊಳ್ಳುತ್ತ ನಾನು ಅಲ್ಲಿಂದ ಕದಲಿದೆ.

ಆರಂಭದಲ್ಲಿ ಆರ್ಕಿಟೆಕ್ಟ್ ಸೂಚಿಸಿದ ಮೇರೆಗೆ ಸರಿಯಾಗಿ ಆರು ತಿಂಗಳಿಗೆ ಅಲ್ಲಿನ ಕೆಲಸ ಪೂರ್ಣಗೊಂಡು, ನಂತರ ನಾನು ನಿರುದ್ಯೋಗಿಯಾದೆ. ಆ ಆರೂ ತಿಂಗಳು ನಾನು ಸಲ್ಲಿಸಿದ ದೈನಿಕ ವರದಿಯ ಬಗ್ಗೆ ಪದೇಪದೇ ವೆಂಕಟರಮಣನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾ, ಅವರೇ ನನ್ನ ಮುಂದಿನ ಉದ್ಯೋಗಕ್ಕೆ ಹಾದಿ ತೋರಿಯಾರೆಂದು ಭ್ರಮಿಸುತ್ತ ಅವರ ಕಚೇರಿಗೆ ನಾನು ಎಡತಾಕಿದ್ದು ವ್ಯರ್ಥವಾಯಿತು. ಅವರನ್ನು ಬೆಂಗಳೂರು ಗಾಲ್ಫ್ ಕ್ಲಬ್ಬಿನ ಅಧ್ಯಕ್ಷ ಪದವಿಯು ಅರಸುತ್ತ ಬಂದ ನಿಮಿತ್ತ ಅವರು ಬೆಂಗಳೂರು ಫುಟ್ಬಾಲ್ ಗ್ರೌಂಡ್ ಸಮೀಪದಲ್ಲಿರುವ ತಮ್ಮ ಅಧಿಕೃತ ಕಚೇರಿಯನ್ನು  ಸುಪುತ್ರ ಆರ್ಕಿಟೆಕ್ಟ್ ನರೇಶ್ ವಹಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಏರ್ಪಡಿಸಿ ನಿರ್ಗಮಿಸಿದ್ದರು. ನರೇಶ್ ನನ್ನೊಂದಿಗೆ ಸಂಭಾಷಿಸಿ, 'ಅಗತ್ಯ ಏರ್ಪಟ್ಟಾಗ ಫೀಲ್ಡ್ ವರ್ಕಿಗೆ ಕರೆಯುತ್ತೇನೆ' ಎಂಬ ಆಶ್ವಾಸನೆ ನೀಡಿದರು. ಅವರ ಕಚೇರಿಯಲ್ಲಿ ಟೇಬಲ್ ವರ್ಕ್ ಕೇವಲ ಹೆಣ್ಣುಮಕ್ಕಳಿಗೆ ಮೀಸಲಾಗಿದ್ದ ನಿಮಿತ್ತ ನಾನು ನಿಷ್ಣಾತನಾಗಿದ್ದರೂ ಅ ಕೆಲಸವನ್ನು ಅವರು ನನಗೆ ವಹಿಸುವಂತಿರಲಿಲ್ಲ. ತತ್ಪರಿಣಾಮ, ಮತ್ತೆ ಮೊದಲಿಟ್ಟಿತು ನನ್ನ 'ಅಪ್ಲೈ ಅಪ್ಲೈ ಬಟ್ ನೋ ರಿಪ್ಲೈ' ದಿನಚರಿ!

ಆ ಮೇರೆಗೆ ಒಂದೆರಡು ತಿಂಗಳ ಸಮಯ ವ್ಯರ್ಥವಾದ ನಂತರ 'ವರದಿಗಾರರು ಬೇಕಾಗಿದ್ದಾರೆ, ನೇರವಾಗಿ ಭೇಟಿಯಾಗತಕ್ಕದ್ದು' ಎಂಬ 'ಸದರ್ನ್ ಹೆರಾಲ್ಡ್' ಪತ್ರಿಕೆಯ ಜಾಹಿರಾತು ನನ್ನನ್ನು ಆಕರ್ಷಿಸಿತು. ಆ ಜಾಹಿರಾತು, 'ನಿರುದ್ಯೋಗದ ಅವಧಿಯನ್ನು ಕುಗ್ಗಿಸಲು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರವನ್ನಷ್ಟೇ ನೆಚ್ಚಿಕೊಳ್ಳದೆ ಆಗೀಗ ಪತ್ರಿಕೆಗಳನ್ನೂ ಎಡತಾಕುವುದು ಲೇಸು' ಎಂದು ನನ್ನನ್ನು ಪ್ರೇರಿಸುತ್ತಿತ್ತು. ಪೀಣ್ಯದಲ್ಲಿದ್ದ ಆ ಪತ್ರಿಕೆಯ ಕಾರ್ಯಾಲಯದಲ್ಲಿ ಸಿ ಟಿ ಜೋಷಿಯವರ ನೇತೃತ್ವದಲ್ಲಿ ಸಂದರ್ಶನ ನಡೆಯುತ್ತಿತ್ತು. ಆಗ್ಗೆ ಪ್ರಕಟವಾಗಿದ್ದ ನನ್ನ 'ಮರುಭೂಮಿ' ಕಾದಂಬರಿಯ ಪ್ರತಿ, ಉದಯವಾಣಿ ಪತ್ರಿಕೆಯು ಪ್ರಕಟಿಸಿದ್ದ ನನ್ನ ವಾರದ ಕತೆಗಳ ಬಂಚ್ ಹಾಗೂ ಮುಂಬೈಯಲ್ಲಿ ಪ್ರಕಟವಾಗಿದ್ದ ಅಂಕಣ 'ರಂಗನ ದಿನಚರಿ' ಕ್ಲಿಪಿಂಗ್ಸನ್ನು ಅವರ ಮುಂದಿಟ್ಟೆ. ಅವುಗಳತ್ತ ಒಂದು ಕ್ಷಣ ಕಣ್ಣಾಡಿಸಿದ ಅವರು 'ಒಂದು A4 ಸೈಜಿನ ಹಾಳೆಯಲ್ಲಿ ನೀವು ಇದುವರೆಗೆ ನಡೆದು ಬಂದ ದಾರಿ ಕುರಿತು ಬರೆಯಿರಿ, ಆನಂತರ ನೋಡೋಣ' ಎಂದರು.

ಆ ಪರೀಕ್ಷೆಯಲ್ಲಿ ನಾನು ಗೆದ್ದು, 'ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಇಲ್ಲದಿದ್ದಾಗ ಜೀವನಪಾಯಕ್ಕಾಗಿ ಆಗಿಂದಾಗ್ಗೆ ಪತ್ರಿಕೋದ್ಯಮವನ್ನೂ ನಾನು ಆಶ್ರಯಿಸಬಹುದು' ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡೆ.

Wednesday 6 March 2024

ಬದುಕಿನ ಹಾದಿ - 9

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/


ಮೇಲ್ಕಂಡ ಉಕ್ತಿಯ ಭಾವಾರ್ಥ: ಈ ಜೀವನದಲ್ಲಿ ತಾಯಿಯ ಪ್ರೀತಿಯೇ ಶ್ರೇಷ್ಠ, ಅವಳೇ ದೇವಾಲಯ, ಅವಳೇ ಪೂಜೆ ಮತ್ತು ಅವಳೇ ಸಮಸ್ತ ಜಗತ್ತು.

ವಿದ್ಯಾರ್ಥಿಗಳ ಕಾಲುಕಾಲಿನ ಮೇಲೆ ಹೊಡೆದು ಅವರ ಅಂಗಸಾಧನೆ ಮಟ್ಟವನ್ನು ಸುಧಾರಿಸುವ ಪ್ರಯತ್ನದಲ್ಲಿ NCC ತರಬೇತುದಾರರು ಹಾಗೂ ಡ್ರಿಲ್ ಮಾಸ್ಟರ್ ಸದಾ ಇರುವರೆಂಬ ಕುಖ್ಯಾತಿಯನ್ನು ಶಾಲಾಕಾಲೇಜುಗಳು ಹೊತ್ತಿದ್ದ ದಿನಗಳವು. 'ನಾನು ಅಂಥವನಲ್ಲವೇ ಅಲ್ಲ' ಎಂದು ವಾದಿಸಿದರು ನನ್ನ ತಂಗಿಯನ್ನು ಮದುವೆಯಾಗಲಿದ್ದ ವರ, ಡ್ರಿಲ್ ಮಾಸ್ಟರ್ ಶ್ರೀನಿವಾಸರಂಗಯ್ಯಂಗಾರ್.

ಆ ಸಂದರ್ಭದಲ್ಲಿ ನಮ್ಮಮ್ಮನ ಗಮನವಿದ್ದುದು ತಮ್ಮ ಗೃಹಕಾರ್ಯ, ಕಿಮೀಗಟ್ಟಲೆ ನಡೆದಾಟ ಹಾಗೂ ಶಾಲಾಕರ್ತವ್ಯಗಳ ಮೇಲೆ. ನನ್ನ ಮತ್ತು ನನ್ನ ತಂಗಿಯ ಲಕ್ಷ್ಯ ಕೇಂದ್ರೀಕೃತವಾಗಿದ್ದುದು ನಮ್ಮನಮ್ಮ ಉದ್ಯೋಗಗಳ ಮೇಲೆ. ಆ ಹಿನ್ನೆಲೆಯಲ್ಲಿ ಜವಾಬ್ದಾರಿ ವಹಿಸಿಕೊಂಡು, ಅಮ್ಮನ ಸಂಬಳ ಬಂದ ತಕ್ಷಣ ನಿಯಮಿತ ವೆಚ್ಚಗಳನ್ನು ನನ್ನ ತಮ್ಮ ನಿಭಾಯಿಸುತ್ತಿದ್ದ. ವಿದ್ಯಾರ್ಥಿಯಾಗಿರಬೇಕಾದ ಸಮಯದಲ್ಲಿ ಹಣಕಾಸು ಉಸ್ತುವಾರಿಯ ಹೊರೆ ಹೆಗಲೇರಿದ್ದರಿಂದ ಅವನು ಮೆಟ್ರಿಕ್ ನಪಾಸಾದ ನಂತರ ಮುಂದಕ್ಕೆ ಓದಲಾಗಲಿಲ್ಲ.

ಓದು ಮುಂದುವರಿಸಲಾರದವರು ಪ್ರಪಂಚ ಜ್ಞಾನದಲ್ಲಿ ಓದಿದವರಿಗಿಂತ ಮಿಗಿಲು. ಅಂಥ ಒಂದು ಪ್ರತಿಭೆಯಾಗಿ ನನ್ನ ತಮ್ಮ ಅಭಿವೃದ್ಧಿಗೊಳ್ಳುತ್ತಿರುವನೆಂದು ನಾವು ನಂಬಿದ್ದ ಕಾಲದಲ್ಲಿ ನಾನು ಮದುವೆಯಾದೆ. ಮಹಾರಾಷ್ಟ್ರ ಸರ್ಕಾರದ ಒಂದು ತಾತ್ಕಾಲಿಕ ಹುದ್ದೆಯನ್ನು ನಾನಾಗ ನಿರ್ವಹಿಸುತ್ತಿದ್ದೆ. ಮದುವೆಯಾದ ಒಂದೆರಡು ತಿಂಗಳೊಳಗೇ ಮಹಾರಾಷ್ಟ್ರದ ಜೀವನಶೈಲಿ ರುಚಿಸದ ನನ್ನ ಪತ್ನಿ ಕರ್ನಾಟಕಕ್ಕೆ ಹಿಂದಿರುಗಿದಳು. ಅನಂತರ ಅವಳು ನನ್ನ ತಮ್ಮನಿಗಿದ್ದ ಒಂದು ದುಶ್ಚಟವನ್ನು ಕಂಡುಹಿಡಿದು ತಿಳಿಸಿದಾಗ ನಮ್ಮಮ್ಮ ಕ್ಷಣಕಾಲ ಚಿಂತಿತರಾದರೂ,  ಅವನು ನಿರ್ವಹಿಸುತ್ತಿದ್ದ ಮನೆಯ ಹಣಕಾಸು ವ್ಯವಹಾರದಲ್ಲಿ ಯಾವುದೇ ಕೊರತೆ ಇಲ್ಲದ್ದನ್ನು ನೆನೆದು ಆ ವ್ಯಥೆಯನ್ನು ತ್ಯಜಿಸಿದರು.

ನಾನು ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಸೇರಿದ ಒಂದೆರಡು ತಿಂಗಳ ನಂತರ ಅಲ್ಲಿನ ಆಪ್ತ ತಾಂತ್ರಿಕ ಸಹಾಯಕ ಇಂಜಿನಿಯರ್ ನಿವೃತ್ತಿ ಹೊಂದಿದರು. ಆ ಸ್ಥಾನವನ್ನು ನಾನು ನಿರ್ವಹಿಸುವಂತೆ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದಾಗ ನಾನು ಆಶ್ಚರ್ಯಚಕಿತನಾದೆ. ಮರಾಠಿ ಭಾಷೆಗೆ ನಾನು ಹೊಂದಿಕೊಳ್ಳುವುದು ಸ್ವಲ್ಪ ನಿಧಾನವೇ ಆಗಿದ್ದರೂ ಆಂಗ್ಲ ಭಾಷೆಯ ಮೇಲೆ ನಾನು ಹೊಂದಿದ್ದ ಹಿಡಿತವನ್ನು ಗಮನಿಸಿ ಆ ಆದೇಶವನ್ನು ನನಗೆ ನೀಡಲಾಗಿತ್ತು. ಬೃಹತ್ ನೀರಾವರಿ ಯೋಜನೆಗಳ ಅನ್ವೇಷಣೆ ಜವಾಬ್ದಾರಿಗೆ ಬದ್ಧರಾಗಿದ್ದ ಆ ಚಾಣಾಕ್ಷ ಎಕ್ಸಿಕ್ಯೂಟಿವ್ ಇಂಜಿನಿಯರ್ ವಾರ್ಷಿಕ ವರದಿಯಲ್ಲಿ ನನ್ನ ಸಹಾಯಕ ವೃತ್ತಿ ಉತ್ತಮವೆಂದು ದಾಖಲಿಸಿದ ನಿಮಿತ್ತ, ಕ್ಲಿಷ್ಟಕರವಾದ ಕರ್ತವ್ಯಗಳಿಗೆ ಹೆಸರುವಾಸಿಯಾದ ಆ ನನ್ನ ಹುದ್ದೆ ಖಾಯಂ ಆಯಿತು. ಆಗ್ಗೆ ನಾವು ವರದಿ ಸಲ್ಲಿಸಿದ 'ಮೋರ್ಬಾ' ಜಲಾಶಯದ ನಿರ್ಮಾಣ ಪೂರ್ಣಗೊಂಡು, ಅದೀಗ ಬೃಹತ್ ಮುಂಬಯಿಯ ಕುಡಿಯುವ ನೀರು ಸರಬರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದೇ ರೀತಿ, ನಾವು ಅನ್ವೇಷಿಸಿದ 'ಹೆಟವಣೆ' ಜಲಾಶಯದ ನೀರು ಮುಂಬಯಿ ಮತ್ತು ಪೂನಾ ನಡುವೆ ಅಗಾಧವಾಗಿ ಹರಡಿರುವ ಕೃಷಿ ಕ್ಷೇತ್ರದ ಅಗತ್ಯಗಳನ್ನು ಅತ್ಯುತ್ತಮವಾಗಿ ಪೂರೈಸುತ್ತಿದೆ.

ಆ ಇಲಾಖೆಯಲ್ಲಿ ನನ್ನ ನಾಲ್ಕು ವರ್ಷಗಳ ಸೇವೆಯ ನಂತರವೂ ನನ್ನ ಪತ್ನಿ ಹಿಂದಿರುಗಲಿಲ್ಲ. ಮಹಾರಾಷ್ಟ್ರದಲ್ಲಿ ನೆಲೆಸುವುದು ಅವಳಿಗೆ ಸುತರಾಂ ಇಷ್ಟವಿರಲಿಲ್ಲ. 'ಅವಳಿಗೆ ಇಷ್ಟವಿಲ್ಲದಿದ್ದರೆ ನಿನ್ನದಾದರೂ ಏನು ಹಠ, ಕರ್ನಾಟಕಕ್ಕೆ ಹಿಂದಿರುಗಿ ಯಾವುದಾದರೂ ಕೆಲಸ ಹುಡುಕಿಕೊ' ಎಂದು ನಮ್ಮಮ್ಮ ಸೂಚಿಸಿದಾಗ ಆ ಕುರಿತು ನಾನು ತೀವ್ರವಾಗಿ ಆಲೋಚಿಸತೊಡಗಿದೆ. ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಖಾಸಗಿ ಹುದ್ದೆಗಳಲ್ಲಿ ಆಶ್ವಾಸನೆ ಶೂನ್ಯ. ಅವುಗಳನ್ನು ಅರಿಸಿಕೊಂಡರೆ ಕೆಲಸದಿಂದ ಕೆಲಸಕ್ಕೆ ಹಾರುತ್ತ, ಮಧ್ಯೆಮಧ್ಯೆ ನಿರುದ್ಯೋಗದ ಸಂಕಷ್ಟವನ್ನೂ ಅನುಭವಿಸುತ್ತಿರಬೇಕಾಗುತ್ತದೆ (ಇದನ್ನು ಕುರಿತು ನಾನು ಬರೆದ ಅಂತರ್ಜಾಲ ಅಂಚೆಯ ಲಿಂಕ್: https://www.speakingtree.in/allslides/ups-and-downs-of-a-civil-engineer). 




Sunday 3 March 2024

ಬದುಕಿನ ಹಾದಿ - 8

 ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು. ಲಿಂಕ್: https://virendrakumarkochar.blogspot.com/

ಮೇಲ್ಕಂಡ ಉಕ್ತಿಯ ಭಾವಾರ್ಥ: ಜೀವನದಲ್ಲಿ ಯಾರನ್ನೂ ದೂಷಿಸಬೇಡಿ, ಏಕೆಂದರೆ ಒಳ್ಳೆಯವರಿಂದ ಸಂತೋಷವನ್ನೂ, ಕೆಟ್ಟವರಿಂದ ಬದುಕಿನ ಅನುಭವವನ್ನೂ ನೀವು ಸಂಪಾದಿಸುವುದು ನಿಶ್ಚಿತ.

ವಿದ್ಯಾರ್ಥಿ ದೆಸೆಯ ನಂತರ ನಾನು ಉದ್ಯೋಗದ ಬೇಟೆ ಆರಂಭಿಸಿದ್ದ ದಿನಗಳವು. ದೂರದ ರಾಮೇಶ್ವರಕ್ಕೆ ತೆರಳಿ, ರಾಮನಾಥಪುರಂ ಟ್ರಸ್ಟ್ ಎಂಬ ಧಾರ್ಮಿಕ ಕೇಂದ್ರದಲ್ಲಿ ಸಂದರ್ಶನಕ್ಕೆ ಹಾಜರಾಗಿ ತಿರುವಾಡಾನೈ ಎಂಬಲ್ಲಿ ಸಿವಿಲ್ ಇಂಜಿನಿಯರ್ ಹುದ್ದೆ ನಿರ್ವಹಿಸಲು ನಾನು ಆಯ್ಕೆಯಾದೆ (ಅಲ್ಲಿನ ಅನುಭವ ಕುರಿತು ನಾನು ಬರೆದ ಅಂತರ್ಜಾಲ ಅಂಚೆಯ ಲಿಂಕ್: https://allinmycircle.blogspot.com/2019/05/memories-never-die.html).

ಅಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಒಮ್ಮೆ ನಮ್ಮಮ್ಮ ಮತ್ತು ಅವರ ಸ್ನೇಹಿತೆ ಅಚ್ಚಮ್ಮ ತೀರ್ಥಯಾತ್ರೆ ಸಲುವಾಗಿ ಬಂದರು. ಆ ಸಂದರ್ಭದಲ್ಲಿ ತ್ರಿವಿಕ್ರಮ ಅಯ್ಯರ್ ಎಂಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಆಗಮಿಸಿ ನಮ್ಮಮ್ಮನನ್ನು ಭೇಟಿಯಾದ. ತೀರ್ಥಯಾತ್ರೆಗೆ ಆಗಮಿಸಿದ ಆತ ಆ ಊರಿನಲ್ಲಿ ಯಾರನ್ನೋ ನೋಡಬೇಕಿತ್ತಂತೆ. ನೋಡಲು ಸಾಧ್ಯವಾಗದೆ ಮನೆಯ ಬೀಗಮುದ್ರೆ ಕಂಡು ಕಂಗಾಲಾಗಿ ನಮ್ಮಲ್ಲಿಗೆ ಬಂದನಂತೆ. ನಮ್ಮ ಮನೆಯ ಜಗಲಿಯ ಮೇಲೆ ಒಂದೆರಡು ದಿನ ಉಳಿದು ನೋಡಬೇಕಾದವರನ್ನು ನೋಡಿಯೇ ಹಿಂದಿರುಗಲು ನಿರ್ಧರಿಸಿದನಂತೆ. ಯಾತ್ರಾರ್ಥಿಗಳಿಗೆ ಅಂಥ ಸನ್ನಿವೇಶಗಳು ಸಹಜವಾದ್ದರಿಂದ, ಆ ಕುಟುಂಬದ ಗಲಿಬಿಲಿಯನ್ನು ನಿವಾರಿಸುವುದು ಅತ್ಯಗತ್ಯವಾದ ನಿಮಿತ್ತ, ಆತನ ಕೋರಿಕೆಯನ್ನು ನಮ್ಮಮ್ಮ ಮನ್ನಿಸಿದರಂತೆ.

ಅಂದು ಅಚ್ಚಮ್ಮ ತಯಾರಿಸುವೆನೆಂದಿದ್ದ, ನಮ್ಮ ಕುಟುಂಬಕ್ಕೆ ಅಪರೂಪವಾದ ಖಾದ್ಯ ರಾಗಿಮುದ್ದೆಯೊಂದಿಗೆ ನಮ್ಮಮ್ಮ ನನ್ನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ನಾನು ಮನೆ ಪ್ರವೇಶಿಸುವ ಮುನ್ನ ಸುಸಂಸ್ಕೃತರೆಂದು ತೋರುತ್ತಿದ್ದ ಅಪರಿಚಿತರನ್ನು ಜಗಲಿಯ ಮೇಲೆ ಕಂಡು ಚಕಿತನಾದೆ. ಆ ಮೂವರ ಪೈಕಿ ಮಹಿಳೆ ಸ್ವಂತ ಕಾರ್ಯದಲ್ಲಿ ಮಗ್ನರಾಗಿರುವಲ್ಲಿ, ಪುರುಷ ಹಾಗೂ ಬಾಲಕಿ ದಿಟ್ಟಿಸಿ ನೋಡುತ್ತ ನನ್ನ ಬರವನ್ನು ಗಮನಿಸುತ್ತಿದ್ದರು. ಮನದಿಂಗಿತವನ್ನು ನಿಯಂತ್ರಿಸಿಕೊಳ್ಳುತ್ತ ಮಾತನಾಡದೆ ಮನೆಯೊಳಕ್ಕೆ ನಾನು ಬಂದ ತಕ್ಷಣ ಅಮ್ಮ, ಆಹ್ವಾನ ಇಲ್ಲದೆ ಆಗಮಿಸಿದ ಆ ಅತಿಥಿಗಳು ಎದುರಿಸುತ್ತಿದ್ದ ಪರಿಸ್ಥಿತಿಯನ್ನೂ, ಆ ಕುರಿತು ತಾನು ಕೈಗೊಂಡ ತೀರ್ಮಾನವನ್ನೂ ವಿವರಿಸಿದರು. ಅಮ್ಮ ನನ್ನೊಂದಿಗೆ ಮಾತನಾಡುತ್ತಿರುವಾಗ ಅಡುಗೆ ಮನೆಯಿಂದ ಖಾದ್ಯದ ಪಾತ್ರೆಗಳೊಂದಿಗೆ ಬಂದ ಅಚ್ಚಮ್ಮ 'ಅತಿಥಿಗಳಿಗೆ ಬಡಿಸಿಬಿಡುತ್ತೇನೆ' ಎಂದು ಸಂಜ್ಞೆಯ ಮೂಲಕ ಸೂಚಿಸುತ್ತ ಜಗಲಿಯತ್ತ ಸಾಗಿದರು.

ಕೆಲವೇ ನಿಮಿಷಗಳಲ್ಲಿ ಜಗಲಿಯೆಡೆಯಿಂದ ಕೇಕೆ ಹಾಕಿ ನಗುವ ಸದ್ದು ಕೇಳಿಸಿತು. ನಾನು, ಅಮ್ಮ ಮನೆಯೊಳಗಿಂದ ಹೊರಕ್ಕೆ ಧಾವಿಸಿದೆವು. ನಮ್ಮನ್ನು ನೋಡಿದ ಬಳಿಕ ತ್ರಿವಿಕ್ರಮ ಅಯ್ಯರ್ ಅಚ್ಚಮ್ಮನವರತ್ತ ಬೆರಳು ತೋರಿ 'ಗಾಜುಗಳಿ ಅಚ್ಚಮ್ಮ' ಎಂದು ಕೂಗುತ್ತ ತನ್ನ ನಗೆಯ ಅಬ್ಬರವನ್ನು ಮತ್ತೂ ಹೆಚ್ಚಿಸಿದ. ತಬ್ಬಿಬ್ಬಾದ ಅಚ್ಚಮ್ಮ ತಮ್ಮ ಕೈಲಿದ್ದ ರಾಗಿಮುದ್ದೆಯ ಪಾತ್ರೆಯನ್ನು ನಮ್ಮ ಮುಂದೆ ಹಿಡಿದರು. ಅದರಲ್ಲಿ ಮುದ್ದೆ ಎಂದಿನ ಚೆಂಡಿನ ಆಕಾರದಲ್ಲಿರದೆ ಗಾಜಿನ ಹಳಿಯ ರೂಪದಲ್ಲಿ ಹರಡಿಕೊಂಡಿತ್ತು. ಮುದ್ದೆಯನ್ನು ಉಂಡೆ ಕಟ್ಟದೆ ಹಾಗೇ ಸೌಟಿನಿಂದೆತ್ತಿ ಬಡಿಸುವ ಉದ್ದೇಶ ಅಚ್ಚಮ್ಮನವರಿಗಿದ್ದಿರಬೇಕು, ಅದು ಅತಿಥಿಗೆ ವಿಚಿತ್ರವಾಗಿ ಕಂಡು ಆ ಉದ್ಗಾರ ಆತನ ಬಾಯಿಂದ ಹೊರಬೀಳಲು ಕಾರಣವಾಗಿರಬೇಕು. ಆತ ತಮಿಳಿನಲ್ಲಿ 'ಗಾಜು' ಎಂಬ ಪೂರ್ವ ಪದವನ್ನೂ, 'ಕಳಿ' ಎಂಬ ಉತ್ತರ ಪದವನ್ನೂ ಬಳಸಿ ಅದರ ಆದೇಶ ರೂಪವಾದ 'ಗಾಜುಗಳಿ' ಎಂಬ ಉದ್ಗಾರ ಹೊರಡಿಸಿದ್ದ. ಮುದ್ದೆಯನ್ನು ತಮಿಳಿನಲ್ಲಿ 'ಕಳಿ' ಎನ್ನುತ್ತಾರೆ.

ಒಂದೆರಡು ಗಂಟೆಗಳಷ್ಟು ಸಮಯ ಉರುಳುವುದರೊಳಗೆ ತ್ರಿವಿಕ್ರಮ ಅಯ್ಯರ್ ಸಂಸಾರ ನಮ್ಮಮ್ಮ ಹಾಗೂ ಅಚ್ಚಮ್ಮನವರಿಗೆ ಅತ್ಯಂತ ಹತ್ತಿರವಾಗಿಬಿಟ್ಟಿತ್ತು. 'ಕಳೆದ ಹತ್ತು ವರ್ಷಗಳಲ್ಲಿ ಮನೆಯಲ್ಲಿ ತಾನು ಒಮ್ಮೆಯೂ ಹೆಂಗಸರಿಗೆ ಅಡುಗೆ ಮಾಡಲು ಬಿಟ್ಟಿಲ್ಲ. ತನ್ನ ಅಡುಗೆ ಕೈಚಳಕವೇ ಅಂಥದ್ದು. ಅದರ ರುಚಿ ನೋಡಲು ದಿನವೂ ಮನೆ ಮುಂದೆ ಪರಿಚಿತರು ಕ್ಯೂ ನಿಲ್ಲುತ್ತಿದ್ದರು' ಎಂದು ಪತ್ನಿ, ಪುತ್ರಿಯ ಕಡೆ ನೋಡುತ್ತಾ ತ್ರಿವಿಕ್ರಮ ಅಯ್ಯರ್ ಸ್ವಪ್ರತಿಷ್ಠೆ ಮೆರೆದನಂತೆ!

ಅಚ್ಚಮ್ಮ ಕುತೂಹಲ ಹತ್ತಿಕ್ಕಲಾರದೆ, 'ಅವಕಾಶ ನೀಡಿದರೆ ಈ ಮನೆಯಲ್ಲೂ ಅಡುಗೆಗೆ ತಾವು ಸಿದ್ಧರೇನೋ' ಎಂದುಬಿಟ್ಟರಂತೆ. ಆ ಸಂದರ್ಭದಲ್ಲಿ ಜೀವನ ಪೂರ್ತಿ ಅಡುಗೆ ಮಾಡಿ ಹಣ್ಣಾದ ಭಾವ ನಮ್ಮಮ್ಮನ ಮುಖದಿಂದಲೂ ಇಣುಕುತ್ತಿದ್ದಿತ್ತಂತೆ. ಅಚ್ಚಮ್ಮನವರ ಆ ಮಾತಿಗೇ ಕಾಯುತ್ತಿದ್ದನೇನೋ ಎಂಬಂತೆ ಠಣ್ಣನೆ ಜಗಲಿಯಿಂದ ಮನೆಯೊಳಕ್ಕೆ ಜಿಗಿದ ತ್ರಿವಿಕ್ರಮ ಅಯ್ಯರ್, 'ಮೈತ್ರೀ ಅದು ಕೊಂಡುವಾಡೀ, ಇದು ಕೊಂಡುವಾಡೀ (ಮೈತ್ರೀ ಅದನ್ನು ತೊಗೊಂಡು ಬಾರೇ, ಇದನ್ನು ತೊಗೊಂಡು ಬಾರೇ)' ಎಂದು ಮಗಳಿಗೆ ಆರ್ಡರ್ ಮಾಡುತ್ತ ಆಶ್ಚರ್ಯಕರವಾದ ರೀತಿಯಲ್ಲಿ ಅಡುಗೆಮನೆ ಉಸ್ತುವಾರಿಗೆ ಸನ್ನದ್ಧನಾಗಿ ನಿಂತುಬಿಟ್ಟನಂತೆ!!!

ರಾತ್ರಿ ಕಾರ್ಯಕ್ಷೇತ್ರದಿಂದ ಹಿಂದಿರುಗಿದ ಬಳಿಕ ವಿಶೇಷ ಭಕ್ಷ್ಯಗಳ ಸ್ವಾಗತ ದೊರೆತ ನಿಮಿತ್ತ, ಜಗಲಿಯಿಂದ ಎದ್ದುಬಂದು ಮನೆಯೊಳಗೇ ಸೆಟ್ಲ್ ಆಗಿಬಿಟ್ಟ ಅಪರಿಚಿತ ಅತಿಥಿಗಳನ್ನು ಟೀಕಿಸಲು ನಾನು ಮುಂದಾಗಲಿಲ್ಲ. ಹಾಗೇ ಎರಡು ದಿನ ಮುಂದುವರಿದ ನಂತರ ಆ ಅತಿಥಿಗಳು ಪ್ರತ್ಯೇಕವಾಗಿ ನಮ್ಮಮ್ಮನೊಂದಿಗೆ 'ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?' ಎಂದು ಪ್ರಶ್ನಿಸಿದರಂತೆ. ಅಲ್ಲೇ ಇದ್ದ ಅಚ್ಚಮ್ಮ ಒಡನೆಯೇ, 'ಅವಳಿಗೂ ನಿಮ್ಮ ಮಗನಿಗೂ ಒಳ್ಳೆಯ ಜೋಡಿಯಾಗುತ್ತದೆ' ಎಂದು ನಮ್ಮಮ್ಮನ ಬೆನ್ನು ತಟ್ಟಿದರಂತೆ!

ನಂತರ ನೇರವಾಗಿ ತ್ರಿವಿಕ್ರಮ ಅಯ್ಯರ್ 'ನನ್ನ ಮಗಳು ಮೈತ್ರಿಯನ್ನು ಕುರಿತು ನಿಮ್ಮಮ್ಮನ ಸಂಗಡ ಮಾತನಾಡಿದ್ದೇನೆ' ಎಂದು ಆರಂಭಿಸಿದ ಆತನ ಇಂಗಿತವನ್ನು ಅರ್ಥ ಮಾಡಿಕೊಂಡು ಸಂಭಾಷಣೆಯನ್ನು ಮುಂದುವರಿಯಲು ನಾನು ಬಿಡಲಿಲ್ಲ. 'ಈ ಟ್ರಸ್ಟಿನ ನನ್ನ ಉದ್ಯೋಗ ತಾತ್ಕಾಲಿಕ. ಅದನ್ನು ಪರಿಶಿಷ್ಟ ಜಾತಿಯ ಅಭ್ಯರ್ಥಿ ದೊರೆತ ತಕ್ಷಣ ಬಿಟ್ಟುಕೊಟ್ಟು ಹೊರಟರೆ ಭಾರತದಲ್ಲಿ ನಾನೆಲ್ಲಿ ನೆಲೆಸುತ್ತೇನೆಯೋ ಹೇಳಲಾರೆ. ತಮಿಳುನಾಡಿನಲ್ಲಿರುವ ಸಾಧ್ಯತೆ ತೀರಾ ಕಡಿಮೆ' ಎಂದು ನಾನು ಪ್ರತಿಕ್ರಿಯಿಸಿದಾಗ ಪ್ರಕಟವಾದ ಆತನ ಮುಖಭಾವ ಮಾಮೂಲಿ ತಮಿಳರಿಗಿಂತ ವಿಭಿನ್ನವಾಗಿಯೇನೂ ಇರಲಿಲ್ಲ. ಬಹುತೇಕ ತಮಿಳರು ಅನ್ಯ ಭಾಷಾ ಪ್ರಾಂತದ ಗಂಡುಗಳಿಗೆ ಹೆಣ್ಣು ಕೊಡುವುದಿಲ್ಲ. ಮರುದಿನ ಬೆಳಿಗ್ಗೆ ಆ ಸಂಸಾರ ನಮಗೆ ಟಾಟಾ ಹೇಳಿ ಹೊರಟುಹೋಯಿತು.