Friday 5 April 2013

ಆರ್ಕಿಟೆಕ್ಟ್ ಕೆ ಸತೀಶ್ ನಿಧನ: ಒಂದು ತುಂಬಲಾರದ ನಷ್ಟ


ರ್ಕಿಟೆಕ್ಟ್ ಕೆ. ಸತೀಶ್ ನಿಧನದ ಸುದ್ದಿ ಆಘಾತಕಾರಿ. ಇವರಿಗೆ ಸಾಯುವ ವಯಸ್ಸೇನೂ ಆಗಿರಲಿಲ್ಲ. ಚೀನೀ ವಾಸ್ತುಶಾಸ್ತ್ರ 'ಫೆಂಗ್ ಶುಯಿ’ ಯನ್ನು ಅಳವಡಿಸಿಕೊಂಡು ಇವರು ವಿನ್ಯಾಸಿಸಿದ ಅನೇಕ ಕಟ್ಟಡಗಳು ಹಣದ ಹೊಳೆಯನ್ನೇ ಹರಿಸಿವೆಯೆನ್ನುವ ವಾಸದ ಮನೆ ಸಂಕೀರ್ಣಗಳ ಮಾಲೀಕರಿದ್ದಾರೆ, ವಾಣಿಜ್ಯ ಕೇಂದ್ರಗಳ ಸ್ಥಾಪಕರಿದ್ದಾರೆ. ಭಾರತೀಯ ವಾಸ್ತು ಶಾಸ್ತ್ರಾಧಾರಿತ ಕಟ್ಟಡಗಳಿಗೆ ಒಂದು ಆರೋಗ್ಯಕರವಾದ ಪೈಪೋಟಿ ನೀಡಬಲ್ಲ ಡಿಜ಼ೈನರ್ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದರು.

ಸ್ವಂತ ನಿವೇಶನದಲ್ಲಿ ಮನೆ ಕಟ್ಟಲಿಚ್ಛಿಸುವ ಯಾರಿಗೆ ಬೇಕಾದರೂ, ತಳಪಾಯದಿಂದ ಆರಂಭಿಸಿ ಕಟ್ಟಡ ಪೂರ್ಣಗೊಳ್ಳುವವರೆಗೆ ಅನುಸರಿಸಬೇಕಾದ ಶಿಸ್ತಿನ ಬಗ್ಗೆ ತಿಳುವಳಿಕೆ ನೀಡಲು ಅವರು ತಯಾರಿದ್ದರು. ಅವರು ಅತ್ಯಂತ ಸರಳವಾಗಿ ವಿವರಿಸಿದ್ದನ್ನು ಅಕ್ಷರಶಃ ಅನುಸರಿಸಿ, ಮಾರುಕಟ್ಟೆ ಮೌಲ್ಯಕ್ಕಿಂತ ಶೇ. ೩೦ರಷ್ಟು ಕಡಿಮೆ ವೆಚ್ಚದಲ್ಲಿ ತಂತಮ್ಮ ಗೃಹಗಳನ್ನು ನಿರ್ಮಿಸಿಕಕೊಂಡವರಿದ್ದಾರೆ.

ಅಮಾಯಕರಿಗೆ ಮೋಸ ಮಾಡಿ, ಅವರಿಗೆ ಮನೆ ಕಟ್ಟಿಸಿಕೊಡುವ ನೆಪದಲ್ಲಿ ಕಷ್ಟ ಪಟ್ಟು ದುಡಿದ ಹಣವನ್ನು ಪೋಲು ಮಾಡಿಸುವ ಖದೀಮರು ಗೃಹ ನಿರ್ಮಾಣ ಕ್ಷೇತ್ರದಲ್ಲಿ ತುಂಬಿಹೋಗಿದ್ದಾರೆ. ಆಡು ಭಾಷೆಯಲ್ಲಿ, ಹಂತಹಂತವಾಗಿ, ಸುಲಭವಾಗಿ ಅರ್ಥವಾಗುವಂಥ, ಮನೆ ಕಟ್ಟುವ ವಿಧಾನವನ್ನು ಕುರಿತ ಬರಹಗಳನ್ನು ಪ್ರಕಟಿಸಿ ಆ ಖದೀಮರಿಗೆಲ್ಲ ಸರಿಯಾದ ಪಾಠ ಕಲಿಸಲು ಆರ್ಕಿಟೆಕ್ಟ್ ಕೆ. ಸತೀಶ್ ನಿರ್ಧರಿಸಿದ್ದರು (ಬಲಬದಿಯ ಚಿತ್ರ: ಆರ್ಕಿಟೆಕ್ಟ್ ಸತೀಶ್ ವಿನ್ಯಾಸದ ಒಂದು ಕಟ್ಟಡ).

ತಮ್ಮ ವಿವರಣೆಯನ್ನು ಆಲಿಸಿ, ಸರಳ ಬರಹಗಳನ್ನು ನಿರೂಪಿಸಿ, ಪ್ರಕಟಿಸುವ ಜವಾಬ್ದಾರಿಯನ್ನು ಹೊರಬೇಕೆಂದು ಆರ್ಕಿಟೆಕ್ಟ್ ಕೆ. ಸತೀಶ್ ಈ ಮುನ್ನ ನನ್ನಲ್ಲಿ ವಿನಂತಿಸಿದ್ದರು. ಇದಕ್ಕೆ ೨೦೦೫ರಲ್ಲಿ ಪ್ರಕಟವಾದ ನನ್ನ ಬರಹವೊಂದರ ಲಿಂಕ್ http://articles.economictimes.indiatimes.com/2005-10-24/news/27478628_1_cement-brickbat-terrace  ಅವರಿಗೆ ಪ್ರೇರಣೆ ನೀಡಿತ್ತು. ತಮ್ಮ ಅಪೇಕ್ಷೆಯ ಕೆಲಸ ನನ್ನಿಂದ ಸಾಧ್ಯವೆಂದು ಅವರು ನಂಬಿದಂತಿತ್ತು. ಕಾರಣ, ೨೦೦೫ರಲ್ಲಿ ಪತ್ರಿಕೆಗಳು ನನ್ನಿಂದ ಲೇಖನಗಳನ್ನು ಬರೆಸಿ ಪ್ರಕಟವಾದ ನಂತರ ಸಂಭಾವನೆ ನೀಡುತ್ತಿದ್ದವು. ಆ ದಿನಗಳಲ್ಲಿ ತಾಂತ್ರಿಕ ಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ವಿಚಾರದಲ್ಲಿ ಪತ್ರಿಕೆಗಳಿಗೆ ವಿಶೇಷವಾದ ಕಳಕಳಿಯಿತ್ತು. ಆ ಪದ್ಧತಿಯಿಂದ ಮುಂದೆ ಸಾಗಿ ಹಲವು ವರ್ಷಗಳ ಸಮಯದ ಹಾದಿ ಈಗಾಗಲೇ ಸವೆದಿದೆ. ಜ್ಞಾನಪ್ರಸಾರದ ಸದುದ್ದೇಶಿತ ಸ್ಥಾನವನ್ನು ವ್ಯಾಪಾರೀ ಮನೋಭಾವವು ಆಕ್ರಮಿಸಿಕೊಂಡಿದೆ. 

ಅವರ ಅನನ್ಯವಾದ ವಿವರಣೆಗಳನ್ನು ಆಲಿಸಿ, ಈ ಬ್ಲಾಗ್ ಮುಖಾಂತರ ಅಂಚೆಗಳನ್ನು ನಿರೂಪಿಸಲು ನಾನು ಆರ೦ಭಿಸುವ ಮುನ್ನವೇ ಅವರಿಲ್ಲವಾದರು (ಆರ್ಕಿಟೆಕ್ಟ್ ಕೆ. ಸತೀಶ್ ಅವರ ಕ್ಯಾಬಿನ್). ಹೊರ ಊರಿನ ಮದುವೆ ಸಮಾರಂಭವೊಂದರಲ್ಲಿ  ಭಾಗವಹಿಸಿ ಬೆಂಗಳೂರಿಗೆ ಹಿಂದಿರುಗುವಾಗ ಅವರು ಅಪಘಾತಕ್ಕೀಡಾದರು. ಮೂಳೆ ಮುರಿದಿದ್ದರಿಂದ ಪ್ಲಾಸ್ಟರ್ ಹಾಕಿಸಿಕೊಂಡು ಮನೆಗೆ ಹಿಂದಿರುಗಿದ್ದರು. ಆದರೂ ಅಪಘಾತಾನಂತರದ ಪರಿಣಾಮ ಬದುಕಗೊಡದೆ ಅವರನ್ನು ನುಂಗಿಕೊ೦ಡಿತು.

No comments:

Post a Comment